ಸಮರ್ಪಕ ಕುಡಿಯುವ ನೀರು ಪೂರೈಕೆಗಾಗಿ ₹306 ಕೋಟಿ ಬಿಡುಗಡೆ.. ತ್ವರಿತವಾಗಿ ಕೇಂದ್ರಕ್ಕೆ ಬರ ವರದಿ ಸಲ್ಲಿಕೆ :ಜಿ.ಪರಮೇಶ್ವರ

2 min read · Updated 15 views
WhatsApp
ಸಮರ್ಪಕ ಕುಡಿಯುವ ನೀರು ಪೂರೈಕೆಗಾಗಿ ₹306 ಕೋಟಿ ಬಿಡುಗಡೆ.. ತ್ವರಿತವಾಗಿ ಕೇಂದ್ರಕ್ಕೆ ಬರ ವರದಿ ಸಲ್ಲಿಕೆ :ಜಿ.ಪರಮೇಶ್ವರ

ಬೆಂಗಳೂರು, ಆಗಸ್ಟ್‌ 27 : ನಮ್ಮ ಸರ್ಕಾರ ಈಗಾಗಲೇ ರಾಜ್ಯದ 31 ಜಿಲ್ಲೆಗಳಿಗೆ ₹117 ಕೋಟಿ ಬಿಡುಗಡೆ ಮಾಡಿದೆ. ಇದರ ಜೊತೆಗೆ ಪ್ರತಿ ಗ್ರಾಮೀಣ ಕ್ಷೇತ್ರಕ್ಕೆ ತಲಾ ₹1 ಕೋಟಿಯಂತೆ ₹189 ಕೋಟಿಗಳನ್ನು ಬಿಡುಗಡೆ ಮಾಡಿದ್ದೇವೆ. ಒಟ್ಟಾರೆ ₹306 ಕೋಟಿಗಳನ್ನು ಕುಡಿಯುವ ನೀರಿನ ಉದ್ದೇಶಗಳಿಗಾಗಿ ಬಿಡುಗಡೆ ಮಾಡಿದ್ದೇವೆ. ಬರ ಪರಿಸ್ಥಿತಿಯನ್ನು ನಿಭಾಯಿಸಲು ನಮ್ಮಲ್ಲಿ ಹಣದ ಕೊರತೆಯಿಲ್ಲ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಸ್ಪಷ್ಟಪಡಿಸಿದರು.

ಮುಂದುವರೆದು, ಜಿಲ್ಲಾಧಿಕಾರಿಗಳ ಬಳಿ ಪಿಡಿ ಅಕೌಂಟ್‌ನಲ್ಲಿ ₹329 ಕೋಟಿ ಇದೆ. ಬರ ಘೋಷಣೆಯಾದ ಬಳಿಕ ಬಳಕೆಗೆ ಸೂಚಿಸಲಾಗಿದೆ. ಸರ್ಕಾರವು ರಾಜ್ಯದಲ್ಲಿ ಬರ ನಿರ್ವಹಣೆಗೆ ಒಟ್ಟು ₹635 ಕೋಟಿ ರೂ. ಖರ್ಚು ಮಾಡುತ್ತಿದೆ ಎಂದು ತಿಳಿಸಿದರು.

16ನೇ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ, ಕೇಂದ್ರ ಸರ್ಕಾರ ಎಸ್‌ಡಿಆರ್‌ಎಫ್‌‌ಗೆ ₹1,239 ಕೋಟಿ ಮಂಜೂರು ಮಾಡಬೇಕು. ಮೊದಲ ಕಂತಿನಲ್ಲಿ ₹450 ಕೋಟಿ ಬಿಡುಗಡೆ ಮಾಡಬೇಕು. ಆ ನಿರೀಕ್ಷೆಯಲ್ಲಿ ನಾವಿದ್ದೇವೆ. ₹310 ಕೋಟಿ ರಾಜ್ಯ ಸರ್ಕಾರ ನೀಡಲಿದೆ ಎಂದು ತಿಳಿಸಿದರು.

ಲಿಟಿಗೇಷನ್ ಫಂಡ್‌ನಲ್ಲಿ ₹300 ಕೋಟಿ ಪೈಕಿ ₹116 ಕೋಟಿ ಬಿಡುಗಡೆಯಾಗಿದೆ. ಬರದ ನಷ್ಟವನ್ನು ಅಂದಾಜಿಸಿಲ್ಲ. ಬರ ಪರಿಸ್ಥಿತಿಯನ್ನು15 ದಿನಕ್ಕೊಮ್ಮೆ ಪರಿಶೀಲನೆ ನಡೆಸುತ್ತೇವೆ. ಬರಪೀಡಿತ ತಾಲೂಕುಗಳು ಕಂಡುಬಂದರೆ ಘೋಷಣೆ ಮಾಡುತ್ತೇವೆ. ಈ ತಿಂಗಳ ಕೊನೆಯ ವೇಳೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ‌ ಸಲ್ಲಿಸುತ್ತೇವೆ. ಪ್ರಧಾನ ಮಂತ್ರಿಗಳು, ಗೃಹ ಸಚಿವರು ಮತ್ತು ಕೃಷಿ ಸಚಿವರಿಗೆ ಸಲ್ಲಿಸುತ್ತೇವೆ ಎಂದು ಮಾಹಿತಿ ನೀಡಿದರು.

ಕಳೆದ ಬಾರಿ ಕೇಂದ್ರ ಸರ್ಕಾರ ₹3500 ಕೋಟಿ ನೀಡಲಿಲ್ಲ. ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಸುಪ್ರೀಂ ಕೋರ್ಟ್‌ ನಿರ್ದೇಶನದ ಬಳಿಕ ಹಣ ಬಿಡುಗಡೆ ಮಾಡಿದರು. ಆ ಪರಿಸ್ಥಿತಿ ತರಬಾರದು. ಜನ, ಜಾನುವಾರುಗಳ ಪರಿಸ್ಥಿತಿಯನ್ನು ಪರಿಗಣಿಸಿ ಶೀಘ್ರವಾಗಿ ಹಣ ಬಿಡುಗಡೆ ಮಾಡುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ 2023ರಲ್ಲಿ ಉಂಟಾದ ಬರಗಾಲದಿಂದ ₹39,000 ಕೋಟಿ ನಷ್ಟವಾಗಿತ್ತು. ₹18,000 ಕೋಟಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರತಿಭಟನೆ ನಡೆಸಿದ, ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕ ₹3500 ಕೋಟಿ ಬಿಡುಗಡೆ ಮಾಡಿದರು. ಈ ಬಾರಿ ಹಾಗಾಗಬಾರದು ಎಂದರು.

ಜನಗಳಿಗೆ ಆತ್ಮಸ್ಥೈರ್ಯ ನೀಡುವ ನಿಟ್ಟಿನಲ್ಲಿ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಮುಖ್ಯಮಂತ್ರಿಗಳು ಸಚಿವರುಗಳಿಗೆ ಸೂಚಿಸಿದ್ದರು. ಅವರು ಭೇಟಿ ನೀಡಿ, ವರದಿ ನೀಡಿದ್ದಾರೆ. ಜೊತೆಗೆ ಜಿಲ್ಲಾಧಿಕಾರಿಗಳು ಕೂಡ ಗ್ರೌಂಡ್ ಟ್ರೂಥಿಂಗ್ ನಡೆಸಿ ವರದಿ ನೀಡಿದ್ದಾರೆ‌. ವಿಪಕ್ಷದವರು ಬರ ಅಧ್ಯಯನ ನಡೆಸಿರುವ ಬಗ್ಗೆ ವರದಿ ನೀಡಿಲ್ಲ. ಅವರು ನೀಡುವ ವರದಿಯನ್ನು ಪರಿಗಣಿಸುತ್ತೇವೆ. ರೈತರಿಗೆ ಬೇಕಿರುವುದು ನೆರವು, ಸಹಾಯ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು. ವರದಿ ನೀಡುವಂತೆ ವಿಪಕ್ಷದವರನ್ನು ಮನವಿ ಮಾಡುತ್ತೇನೆ ಎಂದರು.

ಫಸಲ್ ಬಿಮಾ ಯೋಜನೆಯಡಿ ಈ ಬಾರಿ ದಾಖಲೆ ಮಟ್ಟದಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ಬೆಳೆಯುವ 49 ಲಕ್ಷ ರೈತರು ಈಗಾಗಲೇ ಬೆಳೆ ವಿಮೆ ಮಾಡಿಸಿದ್ದಾರೆ. ರೈತರ ಹಿತರಕ್ಷಣೆಗಾಗಿ ಸರ್ಕಾರವೂ ಸಹ ಇದಕ್ಕೆ ಹೆಚ್ಚಿನ ಒತ್ತಾಸೆ ನೀಡಿದೆ. ಮಳೆಯ ಕೊರತೆಯಿಂದಾಗಿ ಒಂದು ವೇಳೆ ಬೀಜ ಬಿತ್ತಲು ಸಾಧ್ಯವಾಗದಿದ್ದರೂ ಸಹ 'Prevented sowing' (ಬಿತ್ತನೆ ತಡೆ) ಎಂಬ ವಿಶೇಷ ಕ್ಯಾಟಗರಿಯಡಿ ವಿಮಾ ಪರಿಹಾರ ಪಡೆಯಲು ಅವಕಾಶವಿದೆ. ಈ ಸೌಲಭ್ಯದ ಸದುಪಯೋಗ ಪಡೆಯಲು ಅನುಕೂಲವಾಗುವಂತೆ, ಬೆಳೆ ವಿಮೆಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ. ರೈತ ಬಾಂಧವರು ಈ ಹೆಚ್ಚುವರಿ ಕಾಲಾವಕಾಶ ಹಾಗೂ ಯೋಜನೆಯಲ್ಲಿನ ಅವಕಾಶಗಳನ್ನು ಬಳಸಿಕೊಂಡು ತಪ್ಪದೇ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ಬರದ ಕಾರಣದಿಂದ ಜನರು ಗುಳೆ ಹೋಗುವುದನ್ನು ತಪ್ಪಿಸಲು ವಿಬಿ ಜಿ ರಾಮ್ ಜಿ (VB-GRAM-G) ಯೋಜನೆಯಡಿ 16,460 ಕಾಮಗಾರಿಗಳನ್ನು ತೆಗೆದುಕೊಂಡು ಜುಲೈ-1 ರಿಂದ ಆಗಸ್ಟ್ 24ರವರೆಗೆ 66.73 ಲಕ್ಷ ಮಾನವ ದಿನಗಳನ್ನು ಸೃಜಿಸಿದ್ದೇವೆ. ಬರ ಪರಿಸ್ಥಿಯನ್ನು ನಿಭಾಯಿಸುವ ಬಹುಪಾಲು ಕಾಮಗಾರಿಗಳು ಇದರಲ್ಲಿ ಸೇರಿವೆ. ಗುಳೆ ತಡೆಗೆ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಅಧಿಕಾರಿಗಳನ್ನು ನೇಮಿಸಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಪೋಡಿ ಅಭಿಯಾನ, ಕಂದಾಯ ಗ್ರಾಮಗಳ ಘೋಷಣೆ ಮಾಡಿ ಜನರಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುವುದು. ಕೃಷ್ಣಬೈರೇಗೌಡ ಅವರು ಮಾಡಿರುವ ಅಭಿಯಾನ ಮುಂದುವರಿಸಲಾಗುವುದು ಎಂದರು.

ಒಟ್ಟಿನಲ್ಲಿ ಸರ್ಕಾರವು ಬರ ಪರಿಸ್ಥಿತಿಯನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ. ಜನರಿಗೆ ಉದ್ಯೋಗ, ಜನ, ಜಾನುವಾರುಗಳಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಇತ್ಯಾದಿಗಳನ್ನು ಸಮರ್ಥವಾಗಿ ನಿಭಾಯಿಸುತ್ತೇವೆ. ಬರಪೀಡಿತ ಎಂದು ಘೋಷಣೆಯಾದ ತಾಲ್ಲೂಕುಗಳಿಗೆ ತಕ್ಷಣಕ್ಕೆ ಎಸ್‌ಡಿಆರ್‌ಎಫ್ ನಿಧಿಯಲ್ಲಿ ಕುಡಿಯುವ ನೀರಿಗೆ ಖರ್ಚು ಮಾಡುವುದಕ್ಕೆ ಅವಕಾಶ ಸಿಗುತ್ತದೆ. ಬೆಳೆ ಪರಿಹಾರದ ಕುರಿತು ಕೇಂದ್ರಕ್ಕೆ ಮೆಮೊರಾಂಡಮ್ ಸಲ್ಲಿಸಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

.

Advertisement
AdSense · in-feed

Related