ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ 'ಜೀರೋ ಬ್ಯಾಲೆನ್ಸ್' ಸರ್ಕಾರ: ಮಾಜಿ ಸಚಿವ ಸುನೀಲ್ ಕುಮಾರ್ ವಾಗ್ದಾಳಿ

1 min read · Updated 8 views
WhatsApp
ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ 'ಜೀರೋ ಬ್ಯಾಲೆನ್ಸ್' ಸರ್ಕಾರ: ಮಾಜಿ ಸಚಿವ ಸುನೀಲ್ ಕುಮಾರ್ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಸಂಪೂರ್ಣವಾಗಿ 'ಜೀರೋ ಬ್ಯಾಲೆನ್ಸ್' ಹಾಗೂ ದಿವಾಳಿ ಎದ್ದಿರುವ ಸರ್ಕಾರ ಎಂಬುದು ಸ್ವತಃ ಮುಖ್ಯಮಂತ್ರಿಗಳ ಹೇಳಿಕೆಗಳಿಂದಲೇ ಸಾಬೀತಾಗುತ್ತಿದೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಆರ್ಥಿಕ ಬಿಕ್ಕಟ್ಟನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಖಾತೆಗೆ ತಲುಪದ ಪರಿಹಾರ - ಸಿಎಂ ಅಸಹಾಯಕತೆ: "ಕಳೆದ ಸೆಪ್ಟೆಂಬರ್ 17ರಂದೇ ಆರ್ಥಿಕ ಇಲಾಖೆಯು ಯಾವುದೇ ಹೊಸ ಯೋಜನೆಗಳನ್ನು ಘೋಷಿಸದಂತೆ ಎಚ್ಚರಿಸಿ ಪತ್ರ ಬರೆದಿತ್ತು. ಆದಾಗ್ಯೂ, ಸರ್ಕಾರ ಅಧಿವೇಶನದಲ್ಲಿ ರೈತರಿಗೆ ₹2,500 ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿತು. ಆದರೆ ಇಂದಿನವರೆಗೂ ಯಾವುದೇ ರೈತರ ಖಾತೆಗೆ ಆ ಹಣ ಜಮೆಯಾಗಿಲ್ಲ. ಹಣ ಸಂದಾಯವಾಗದಿರುವುದಕ್ಕೆ ಸ್ವತಃ ಕಂದಾಯ ಸಚಿವರೇ ಬೇಸರ ವ್ಯಕ್ತಪಡಿಸಿದ್ದು, ಸರ್ಕಾರ ದಿವಾಳಿಯಾಗಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ" ಎಂದು ಸುನೀಲ್ ಕುಮಾರ್ ಹೇಳಿದರು.

ನಿನ್ನೆ ನಡೆದ ಕಬ್ಬು ಬೆಳೆಗಾರರ ಸಭೆಯನ್ನು ಉಲ್ಲೇಖಿಸಿದ ಅವರು, "ಖಜಾನೆಯಲ್ಲಿ ಹಣ ಎಲ್ಲಿದೆ, ನನ್ನ ಜೇಬಿನಿಂದ ಕೊಡಲು ಸಾಧ್ಯವೇ?" ಎಂದು ಸಿಎಂ ಅಸಹಾಯಕತೆ ವ್ಯಕ್ತಪಡಿಸಿರುವುದು ಸರ್ಕಾರದ ದಿವಾಳಿತನಕ್ಕೆ ಸಾಕ್ಷಿ. ಮುಂಗಾರು ಕೊರತೆಯಿದ್ದಾಗ 'ಬೆಳೆ ಬೆಳೆಯಬೇಡಿ' ಎಂದು ಕೈಚೆಲ್ಲಿದ್ದ ಸರ್ಕಾರ, ಈಗ ಕಬ್ಬು ಬೆಳೆಗಾರರಿಗೂ ಬೆಂಬಲವಾಗಿ ನಿಲ್ಲದೆ ವಿಶ್ವಾಸದ್ರೋಹ ಎಸಗಿದೆ ಎಂದರು.

ಆಡಳಿತ ಯಂತ್ರ ಸಂಪೂರ್ಣ ಕಸರತ್ತು - ಸ್ಟಿಂಗ್ ಆಪರೇಷನ್‌ನಲ್ಲೇ ವ್ಯಸ್ತ: ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ ಎಂದು ಆರೋಪಿಸಿದ ಮಾಜಿ ಸಚಿವರು, "ವಿಧಾನಸೌಧದ ಮೂರನೇ ಮಹಡಿಯಲ್ಲಿ ಆಡಳಿತ ನಡೆಯುತ್ತಿದೆ ಎಂಬ ಭಾಸವೇ ಆಗುತ್ತಿಲ್ಲ. ಯಾವೊಬ್ಬ ಸಚಿವರಿಗೂ ಆಡಳಿತ ಪ್ರಕ್ರಿಯೆಯ ಬಗ್ಗೆ ಗಮನವಿಲ್ಲ. ಮುಖ್ಯಮಂತ್ರಿಯಿಂದ ಹಿಡಿದು ಕಾಂಗ್ರೆಸ್‌ನ ಶಾಸಕರು ಹಾಗೂ ಕಾರ್ಯಕರ್ತರೆಲ್ಲರೂ 'ಸ್ಟಿಂಗ್ ಆಪರೇಷನ್' ನಡೆಸುವುದರಲ್ಲೇ ನಿರತರಾಗಿದ್ದಾರೆ" ಎಂದು ಲೇವಡಿ ಮಾಡಿದರು.

ಜನರಿಗೆ ತಲುಪದ ಗ್ಯಾರಂಟಿ - ಶೂನ್ಯ ಆವರಿಸಿರುವ ಸರ್ಕಾರ: ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಜನರಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರ ಇದುವರೆಗೆ ಕನಿಷ್ಠ ಸಭೆಯನ್ನೂ ನಡೆಸಿಲ್ಲ. ಇತ್ತ ಸರ್ಕಾರ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಗ್ಯಾರಂಟಿ ಯೋಜನೆಗಳು ಕೂಡ ಅರ್ಹ ಜನರಿಗೆ ತಲುಪುತ್ತಿಲ್ಲ. ಯಾವ ವರ್ಗಕ್ಕೂ ನ್ಯಾಯ ಒದಗಿಸಲಾಗದ, ಸಂಪೂರ್ಣ ಶೂನ್ಯ ಆವರಿಸಿರುವ ಅಸಹಾಯಕ ಸರ್ಕಾರ ಇದಾಗಿದೆ ಎಂದು ಸುನೀಲ್ ಕುಮಾರ್ ಖಾರವಾಗಿ ವಾಗ್ದಾಳಿ ನಡೆಸಿದರು.

Advertisement
AdSense · in-feed

Related