ಕರ್ನಾಟಕ ಅಭಿವೃದ್ಧಿ ಹೊಂದಿದರೆ ಭಾರತ ಅಭಿವೃದ್ಧಿ ಹೊಂದುತ್ತದೆ: ಡಾ .ಜಿ. ಪರಮೇಶ್ವರ್.

ನವದೆಹಲಿ, ಜುಲೈ 27 : ಕರ್ನಾಟಕದ ಯೋಜನೆಗಳಿಗೆ ಅನುಮೋದನೆ ನೀಡುವಲ್ಲಿ ಆಗುವ ವಿಳಂಬವು ಕೇವಲ ಒಂದು ರಾಜ್ಯದ ವಿಳಂಬವಲ್ಲ. ಅದು ದೇಶದ ಪ್ರಗತಿಯನ್ನೇ ವಿಳಂಬಗೊಳಿಸುವಂತಾಗಿದೆ .ಕರ್ನಾಟಕ ಅಭಿವೃದ್ಧಿ ಹೊಂದಿದರೆ ಭಾರತ ಅಭಿವೃದ್ಧಿ ಹೊಂದುತ್ತದೆ ಎಂದುಉಪ ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ತಿಳಿಸಿದ್ದಾರೆ.
ಇಂದು ನವದೆಹಲಿಯ ಕರ್ನಾಟಕ ಭವನದಲ್ಲಿ ನಡೆದ ಕರ್ನಾಟಕದ ಸರ್ವಪಕ್ಷ ಸಂಸದರೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ಈಗ ಸಮಯವು ತಟಸ್ಥ ಅಂಶವಾಗಿಲ್ಲ. ಪ್ರತಿಯೊಂದು ಅನುಮೋದನೆಯ ವಿಳಂಬ ಹಾಗೂ ತಡೆಹಿಡಿಯಲ್ಪಡುವ ಅನುದಾನವೂ ಕರ್ನಾಟಕದ ಜನರ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದರು.
ಪ್ರತಿಯೊಂದು ವಿಳಂಬವೂ ಬೆಂಗಳೂರಿನ ನಗರಾಭಿವೃದ್ಧಿ ಸವಾಲುಗಳನ್ನು ಮತ್ತಷ್ಟು ಗಂಭೀರಗೊಳಿಸುತ್ತಿದೆ. ಮೆಟ್ರೋ ವಿಸ್ತರಣೆ, ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (Regional Rapid Transit System – RRTS), ವರ್ತುಲ ರಸ್ತೆ ಯೋಜನೆಗಳು, ಒಳಚರಂಡಿ ನೀರು ಸಂಸ್ಕರಣಾ ಮೂಲಸೌಕರ್ಯ ಹಾಗೂ ನಗರ ಸಂಚಾರ ಸುಧಾರಣಾ ಯೋಜನೆಗಳು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಒಂದಾದ ಬೆಂಗಳೂರನ್ನು ಸಮರ್ಥವಾಗಿ ನಿರ್ವಹಿಸಲು ಅತ್ಯಗತ್ಯವಾಗಿವೆ ಎಂದು ಪ್ರತಿಪಾದಿಸಿದರು.
ಈ ಯೋಜನೆಗಳು ವಿಳಂಬವಾದಾಗ ಸಂಚಾರ ದಟ್ಟಣೆ ಹೆಚ್ಚುತ್ತದೆ, ಉತ್ಪಾದಕತೆ ಕುಸಿಯುತ್ತದೆ, ಮಾಲಿನ್ಯ ಹೆಚ್ಚುತ್ತದೆ ಹಾಗೂ ನಾಗರಿಕರು ಪ್ರತಿದಿನ ಅಮೂಲ್ಯವಾದ ಸಮಯವನ್ನು ಟ್ರಾಫಿಕ್‌ನಲ್ಲೇ ಕಳೆದುಕೊಳ್ಳಬೇಕಾಗುತ್ತದೆ. ನಗರ ಸಂಚಾರ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಅತ್ಯಂತ ಮಹತ್ವದ್ದಾಗಿದ್ದರೂ, ಮೆಟ್ರೋ ಯೋಜನೆಗಳ ಅನುಮೋದನೆ, RRTS ಹಾಗೂ Urban Challenge fund ಯೋಜನೆಗಳಿಗೆ ಸಂಬಂಧಿಸಿದ ರಾಜ್ಯದ ಮನವಿಗಳು ಇನ್ನೂ ಬಾಕಿಯೇ ಉಳಿದಿವೆ ಎಂದು ವಿವರಿಸಿದರು.
ಮುಂದುವರೆದು, ಇದರ ಆರ್ಥಿಕ ಬೆಲೆಯೂ ಅಷ್ಟೇ ದೊಡ್ಡದಾಗಿದೆ. ಹೂಡಿಕೆದಾರರು ಸ್ಥಿರತೆ ಹಾಗೂ ನಿಶ್ಚಿತತೆಯನ್ನು ಬಯಸುತ್ತಾರೆ. ಮೂಲಸೌಕರ್ಯ ಯೋಜನೆಗಳ ವಿಳಂಬದಿಂದ ಯೋಜನೆಗಳ ವೆಚ್ಚ ಹೆಚ್ಚುತ್ತದೆ, ಕೈಗಾರಿಕಾ ಬೆಳವಣಿಗೆ ಮುಂದೂಡಲ್ಪಡುತ್ತದೆ, ಉದ್ಯೋಗ ಸೃಷ್ಟಿ ನಿಧಾನಗೊಳ್ಳುತ್ತದೆ ಹಾಗೂ ಹೂಡಿಕೆ ಮತ್ತು ನಾವೀನ್ಯತೆಯ ಕ್ಷೇತ್ರದಲ್ಲಿ ಭಾರತದ ಮುಂಚೂಣಿ ತಾಣವಾಗಿ ಉಳಿಯುವ ಕರ್ನಾಟಕದ ಸಾಮರ್ಥ್ಯ ದುರ್ಬಲಗೊಳ್ಳುತ್ತದೆ. ಇದರ ಸಾಮಾಜಿಕ ಪರಿಣಾಮವೂ ಅಷ್ಟೇ ಗಂಭೀರವಾಗಿದೆ. ರೈತರು ನೀರಾವರಿಗಾಗಿ ಕಾಯುತ್ತಿದ್ದಾರೆ. ನಗರಗಳು ಕುಡಿಯುವ ನೀರಿಗಾಗಿ ಕಾಯುತ್ತಿವೆ. ಮೂಲಸೌಕರ್ಯ ಹೂಡಿಕೆಗಳಿಂದ ಸೃಷ್ಟಿಯಾಗುವ ಉದ್ಯೋಗಾವಕಾಶಗಳಿಗಾಗಿ ಯುವಜನತೆ ಕಾಯುತ್ತಿದೆ. ಉತ್ತಮ ಸಾರಿಗೆ ಹಾಗೂ ಸಂಪರ್ಕ ವ್ಯವಸ್ಥೆಗಾಗಿ ಕೈಗಾರಿಕೆಗಳು ಮತ್ತು ಉದ್ಯಮಗಳು ಕಾಯುತ್ತಿವೆ. ಮುಂದೂಡಲ್ಪಡುವ ಪ್ರತಿಯೊಂದು ನಿರ್ಧಾರವೂ ನಮ್ಮ ಲಕ್ಷಾಂತರ ನಾಗರಿಕರ ಅವಕಾಶಗಳನ್ನು ಮುಂದೂಡುತ್ತಿದೆ ಎಂದು ವಾಸ್ತವವನ್ನು ತಿಳಿಸಿದರು.
ಅಂತಿಮವಾಗಿ, ಈ ವಿಳಂಬಗಳು ಕೇವಲ ಸರ್ಕಾರಕ್ಕೆ ಮಾತ್ರ ನಷ್ಟವಾಗುವುದಿಲ್ಲ. ಪ್ರತಿಯೊಬ್ಬ ಕನ್ನಡಿಗನಿಗೂ ಹಾನಿ ಮಾಡುತ್ತವೆ. ಭಾರತದ ಆರ್ಥಿಕ ಪ್ರಗತಿಯ ಪ್ರಮುಖ ಶಕ್ತಿಕೇಂದ್ರಗಳಲ್ಲಿ ಒಂದಾಗಿರುವ ಕರ್ನಾಟಕದ ಬೆಳವಣಿಗೆಯ ವೇಗವನ್ನು ಕುಂಠಿತಗೊಳಿಸುತ್ತವೆ ಎಂದು ಹೇಳಿದರು.
ಆದ್ದರಿಂದಲೇ ಇಂದು ನಾವು ಮಾಡುತ್ತಿರುವ ಮನವಿ ಅತ್ಯಂತ ತುರ್ತು ಸ್ವರೂಪದ್ದಾಗಿದೆ. ಇವು ಕೇವಲ ಸಹಿಗಾಗಿ ಕಾಯುತ್ತಿರುವ ಕಡತಗಳಲ್ಲ. ಇವು ಕರ್ನಾಟಕದ ಜಲ ಭದ್ರತೆ, ಆಹಾರ ಭದ್ರತೆ, ಆರ್ಥಿಕ ಸ್ಪರ್ಧಾತ್ಮಕತೆ, ಹವಾಮಾನ ವೈಪರೀತ್ಯವನ್ನು ಎದುರಿಸುವ ಸಾಮರ್ಥ್ಯ ಹಾಗೂ ಮುಂದಿನ ಪೀಳಿಗೆಯ ಜೀವನಮಟ್ಟವನ್ನು ನಿರ್ಧರಿಸುವ ಮಹತ್ವದ ತೀರ್ಮಾನಗಳಾಗಿವೆ. ವಿಳಂಬವಾಗುವ ಪ್ರತಿಯೊಂದು ತಿಂಗಳೂ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ, ವೆಚ್ಚವನ್ನು ಹೆಚ್ಚಿಸುತ್ತದೆ ಹಾಗೂ ನಮ್ಮ ಜನರ ಮೇಲಿನ ಹೊರೆ ಇನ್ನಷ್ಟು ಭಾರವಾಗಿಸುತ್ತದೆ ಎಂದರು.
ಇಂದು ರಾಷ್ಟ್ರೀಯ ಮಹತ್ವ ಹೊಂದಿರುವ ಅನೇಕ ಪ್ರಮುಖ ಪ್ರಸ್ತಾವನೆಗಳು ಭಾರತ ಸರ್ಕಾರದ ವಿವಿಧ ಸಚಿವಾಲಯಗಳ ಮುಂದೆ ಬಾಕಿ ಉಳಿದಿವೆ. ಇವುಗಳಲ್ಲಿ ಮೆಟ್ರೋ ವಿಸ್ತರಣೆ, ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (Regional Rapid Transit System – RRTS), ನೀರಾವರಿ ಯೋಜನೆಗಳು, ನಗರ ಮೂಲಸೌಕರ್ಯ, ಪೊಲೀಸ್ ಆಧುನೀಕರಣ, ಹಣಕಾಸು ಆಯೋಗದ ಅನುದಾನಗಳು, ಜಲಸಂಪನ್ಮೂಲ ಯೋಜನೆಗಳು ಹಾಗೂ ಲಕ್ಷಾಂತರ ನಾಗರಿಕರ ಬದುಕಿನ ಮೇಲೆ ಪರಿಣಾಮ ಬೀರುವ ಇನ್ನೂ ಹಲವು ಮಹತ್ವದ ಯೋಜನೆಗಳು ಸೇರಿವೆ ಎಂದು ಮಾಹಿತಿ ನೀಡಿದರು.
ಅಲ್ಲದೇ, ವಿವಿಧ ಕೇಂದ್ರ ಸಚಿವಾಲಯಗಳ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಸುಮಾರು 60 ಪ್ರಮುಖ ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರ ಸಂಗ್ರಹಿಸಿ ದಾಖಲಿಸಿದೆ. ಇದರಿಂದ ಇನ್ನೂ ಎಷ್ಟೊಂದು ಅನುಮೋದನೆಗಳು ಬಾಕಿಯಿರುವುದರ ವ್ಯಾಪ್ತಿ ಸ್ಪಷ್ಟವಾಗುತ್ತದೆ. ಇವುಗಳಲ್ಲಿ ಹಲವಾರು ಪ್ರಸ್ತಾವನೆಗಳು ಅಗತ್ಯವಿರುವ ಎಲ್ಲ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿವೆ. ಹಲವಾರು ಯೋಜನೆಗಳಿಗೆ ತಾಂತ್ರಿಕ ಅನುಮೋದನೆಗಳೂ ದೊರೆತಿವೆ. ಅನೇಕ ಪ್ರಸ್ತಾವನೆಗಳು ಹಲವು ವರ್ಷಗಳಿಂದ ಬಾಕಿ ಉಳಿದಿವೆ. ಆದಾಗ್ಯೂ, ಅಂತಿಮ ಅನುಮೋದನೆಗಳು ಇನ್ನೂ ವಿಳಂಬವಾಗುತ್ತಿವೆ. ಇದು ನಮ್ಮನ್ನು ತೀವ್ರವಾಗಿ ಕಳವಳಗೊಳಿಸಿದೆ ಎಂದು ತಿಳಿಸಿದರು.
ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ಭೀಕರ ಬರ ಪರಿಸ್ಥಿತಿಗಳಲ್ಲಿ ಒಂದನ್ನು ರಾಜ್ಯವು ಎದುರಿಸುತ್ತಿದ್ದ ಸಂದರ್ಭದಲ್ಲಿ, ರಾಜ್ಯಕ್ಕೆ ನ್ಯಾಯಸಮ್ಮತವಾಗಿ ದೊರಕಬೇಕೆಂದು ನಾವು ನಂಬಿದ್ದ ಬರ ಪರಿಹಾರವನ್ನು ಪಡೆಯಲು ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಮೊರೆ ಹೋಗಬೇಕಾದ ಪರಿಸ್ಥಿತಿ ಉಂಟಾಯಿತು. ಇದು ಕರ್ನಾಟಕದ ಜನರನ್ನು ಇನ್ನಷ್ಟು ನೋಯಿಸಿದ ಸಂಗತಿಯಾಗಿದೆ.ಪ್ರಕೃತಿ ವಿಕೋಪದಂತಹ ಮಾನವೀಯ ಸಂಕಷ್ಟದ ಸಂದರ್ಭದಲ್ಲಿ ಪರಿಹಾರ ಪಡೆಯಲು ಯಾವುದೇ ರಾಜ್ಯ ನ್ಯಾಯಾಂಗದ ಮಧ್ಯಸ್ಥಿಕೆಯನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಎಂದಿಗೂ ಬರಬಾರದು. ಸಹಕಾರಿ ಫೆಡರಲ್ ಪ್ರಜಾಪ್ರಭುತ್ವದಲ್ಲಿ ಇದು ಎಂದಿಗೂ ಸಾಮಾನ್ಯ ಪದ್ಧತಿಯಾಗಬಾರದು ಎಂದು ಬೇಸರ ವ್ಯಕ್ತಪಡಿಸಿದರು.
ನಿಮ್ಮ ಗಮನಕ್ಕೆ ತರಬೇಕಾದ ಮತ್ತೊಂದು ಮಹತ್ವದ ವಿಷಯವೂ ಇದೆ. ದೇಶದ ಖಜಾನೆಗೆ ಅತ್ಯಧಿಕ ಕೊಡುಗೆ ನೀಡುವ ರಾಜ್ಯಗಳಲ್ಲಿ ಒಂದಾಗಿದ್ದರೂ, ಕರ್ನಾಟಕದ ನ್ಯಾಯಸಮ್ಮತ ನಿರೀಕ್ಷೆಗಳಿಗೆ ತಕ್ಕ ತುರ್ತು ಸ್ಪಂದನೆ ದೊರಕುತ್ತಿಲ್ಲ ಎಂಬ ಭಾವನೆ ರಾಜ್ಯದಾದ್ಯಂತ ಹೆಚ್ಚಾಗುತ್ತಿದೆ. ಕರ್ನಾಟಕವು ರಾಷ್ಟ್ರ ನಿರ್ಮಾಣಕ್ಕೆ ಇಷ್ಟೊಂದು ಮಹತ್ವದ ಕೊಡುಗೆ ನೀಡುತ್ತಿದ್ದರೂ, ನಮ್ಮ ನ್ಯಾಯಸಮ್ಮತ ಯೋಜನೆಗಳು ಏಕೆ ಇನ್ನೂ ಅನುಮೋದನೆಗಾಗಿ ಕಾಯುತ್ತಿವೆ ಎಂಬ ಸರಳ ಪ್ರಶ್ನೆಯನ್ನು ಜನರು ಹೆಚ್ಚೆಚ್ಚು ಕೇಳುತ್ತಿದ್ದಾರೆ ಎಂದರು.
ಕರ್ನಾಟಕವು ವಿವಿಧ ರೀತಿಯ ತೆರಿಗೆಗಳ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ₹5 ಲಕ್ಷ ಕೋಟಿಗೂ ಅಧಿಕ ಮೊತ್ತವನ್ನು ಕೊಡುಗೆಯಾಗಿ ನೀಡುತ್ತದೆ. ಆದರೆ ನಾವು ನೀಡುವ ಪ್ರತಿಯೊಂದು ಒಂದು ರೂಪಾಯಿಗೆ ಪ್ರತಿಯಾಗಿ ಕೇವಲ 13 ಪೈಸೆ ಮಾತ್ರ ವಾಪಾಸ್ ಬರುತ್ತಿದೆ. ಈ ಭಾವನೆ ರಾಜ್ಯದ ವಿವಿಧ ಭಾಗಗಳಲ್ಲಿ, ವಿವಿಧ ಜನರಲ್ಲಿ ಹಾಗೂ ಎಲ್ಲ ಪೀಳಿಗೆಗಳಲ್ಲೂ ದಿನದಿಂದ ದಿನಕ್ಕೆ ಮತ್ತಷ್ಟು ಬಲವಾಗುತ್ತಿದೆ ಎಂದು ತಿಳಿಸಿದರು.
ನಿಜವಾದ ಸಹಕಾರಿ ಫೆಡರಲಿಸಂ ಅನ್ನು ಬಲಪಡಿಸುವ ಪ್ರತಿಯೊಂದು ಸುಧಾರಣೆಯನ್ನೂ ನಾವು ಸ್ವಾಗತಿಸುತ್ತೇವೆ. ಹಣಕಾಸಿನ ಹಂಚಿಕೆ ಕುರಿತ ಚರ್ಚೆಗಳಲ್ಲಿ ರಾಜ್ಯಗಳ ಆರ್ಥಿಕ ಕೊಡುಗೆಗೆ ಹೆಚ್ಚಿನ ಮಾನ್ಯತೆ ನೀಡುವಂತಹ ಸಕಾರಾತ್ಮಕ ಕ್ರಮಗಳನ್ನು ಒಳಗೊಂಡಂತೆ, ಉತ್ತಮ ಬೆಳವಣಿಗೆಗಳನ್ನು ನಾವು ಸದಾ ಬೆಂಬಲಿಸಿದ್ದೇವೆ. ಆದರೆ ಸಹಕಾರಿ ಫೆಡರಲಿಸಂ ಎಂಬುದು ಅಂತಿಮವಾಗಿ ಕಾರ್ಯರೂಪದಲ್ಲಿ ಕಾಣಿಸಬೇಕು. ಅನುಮೋದನೆಗಳು ಅರ್ಹತೆಯ ಆಧಾರದ ಮೇಲೆ ದೊರಕಬೇಕು. ಅನುದಾನಗಳು ಸಕಾಲದಲ್ಲಿ ಬಿಡುಗಡೆಯಾಗಬೇಕು. ನೀಡಿದ ಭರವಸೆಗಳು ಗೌರವಿಸಲ್ಪಟ್ಟು ಅನುಷ್ಠಾನಗೊಳ್ಳಬೇಕು.ಸಂಸತ್ತಿನಲ್ಲಿ ಹಾಗೂ ಕೇಂದ್ರ ಬಜೆಟ್‌ಗಳಲ್ಲಿ ನೀಡಲಾಗಿರುವ ಭರವಸೆಗಳು ಅನುಷ್ಠಾನಗೊಳ್ಳುವಂತಾಗಬೇಕು ಎಂದು ಒತ್ತಾಯಿಸಿದರು.
ನಾವು ಉಲ್ಲೇಖಿಸಿರುವ ಪ್ರತಿಯೊಂದು ಬಾಕಿ ಪ್ರಸ್ತಾವನೆಯೂ ಕೇವಲ ಒಂದು ಕಡತವಲ್ಲ. ಅದು ಒಂದು ಹಳ್ಳಿಗೆ ಕುಡಿಯುವ ನೀರನ್ನು ಒದಗಿಸುವ ಆಶಯವಾಗಿದೆ. ಒಬ್ಬ ರೈತನಿಗೆ ನೀರಾವರಿಯನ್ನು ತಲುಪಿಸುವ ಭರವಸೆಯಾಗಿದೆ. ಒಬ್ಬ ಪದವೀಧರ ಯುವಕ ಅಥವಾ ಯುವತಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸುವ ನಿರೀಕ್ಷೆಯಾಗಿದೆ. ಪ್ರತಿದಿನ ಪ್ರಯಾಣಿಸುವ ನಾಗರಿಕನಿಗೆ ಸುಗಮ ಸಂಚಾರವನ್ನು ಒದಗಿಸುವ ಸಂಕಲ್ಪವಾಗಿದೆ. ಒಬ್ಬ ಉದ್ಯಮಿಗೆ ಹೂಡಿಕೆಯ ಅವಕಾಶವಾಗಿದೆ. ನಮ್ಮ ನಾಗರಿಕರಿಗೆ ಸುರಕ್ಷತೆಯನ್ನು ಖಚಿತಪಡಿಸುವ ಹೆಜ್ಜೆಯಾಗಿದೆ. ನಮ್ಮ ರಾಜ್ಯದ ಅಭಿವೃದ್ಧಿಯ ಮಾರ್ಗಸೂಚಿಯಾಗಿದೆ. ಇವು ಕೇವಲ ಅಂಕಿಅಂಶಗಳಲ್ಲ. ಇವು ಲಕ್ಷಾಂತರ ಕನ್ನಡಿಗರ ಕನಸುಗಳು ಮತ್ತು ಆಶೋತ್ತರಗಳಾಗಿವೆ ಎಂದು ತಿಳಿಸಿದರು.
ಆದ್ದರಿಂದ, ಕರ್ನಾಟಕದ ಎಲ್ಲ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರನ್ನು ಪಕ್ಷಾತೀತವಾಗಿ ವಿನಂತಿಸುತ್ತೇನೆ. ಈ ಎಲ್ಲ ವಿಷಯಗಳನ್ನು ಸಂಸತ್ತಿನಲ್ಲಿ, ಸಂಬಂಧಿಸಿದ ಕೇಂದ್ರ ಸಚಿವಾಲಯಗಳ ಮುಂದೆ, ಸಂಸತ್ತಿನ ಸಮಿತಿಗಳಲ್ಲಿ ಹಾಗೂ ಸೂಕ್ತವಾದ ಪ್ರತಿಯೊಂದು ವೇದಿಕೆಯಲ್ಲೂ ದೃಢವಾಗಿ ಪ್ರಸ್ತಾಪಿಸಿ, ಕರ್ನಾಟಕದ ನ್ಯಾಯಸಮ್ಮತ ಹಕ್ಕುಗಳಿಗಾಗಿ ಧ್ವನಿಯಾಗಬೇಕೆಂದು ಕೋರಿದರು.
ಕರ್ನಾಟಕದ ಪರವಾಗಿ ನಾವು ಮಾತನಾಡುವಾಗ ನಮ್ಮ ಧ್ವನಿ ಒಂದೇ ಆಗಿರಬೇಕು. ತಮ್ಮ ರಾಜ್ಯದ ಹಿತಾಸಕ್ತಿಗಾಗಿ ರಾಜಕೀಯವನ್ನು ಮೀರಿ ಒಗ್ಗಟ್ಟಿನಿಂದ ನಿಂತ ನಾಯಕರನ್ನು ಇತಿಹಾಸ ಸದಾ ಗೌರವದಿಂದ ಸ್ಮರಿಸುತ್ತದೆ. ಕರ್ನಾಟಕಕ್ಕೆ ಸಲ್ಲಬೇಕಾದ ಗಮನ, ಅನುಮೋದನೆಗಳು ಹಾಗೂ ಬೆಂಬಲ ದೊರಕುವಂತೆ ನಾವೆಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸೋಣ. ಅದು ಯಾವುದೇ ಉಪಕಾರವಾಗಿ ಅಲ್ಲ. ಯಾವುದೇ ರಿಯಾಯಿತಿಯಾಗಿ ಅಲ್ಲ. ಸಂವಿಧಾನಬದ್ಧ ನ್ಯಾಯ ಹಾಗೂ ರಾಷ್ಟ್ರೀಯ ನ್ಯಾಯದ ಭಾಗವಾಗಿ ಕರ್ನಾಟಕಕ್ಕೆ ಸಲ್ಲಬೇಕಾದ ಹಕ್ಕಾಗಿ ದೊರಕಬೇಕು ಎಂದು ಆಗ್ರಹಿಸಿದರು.
ರಾಜ್ಯ ಬಲಿಷ್ಠವಾದರೆ ಮಾತ್ರ, ದೇಶ ಬಲಿಷ್ಠವಾಗಲು ಸಾಧ್ಯ. ಬಲಿಷ್ಠ ಕರ್ನಾಟಕವೇ, ಬಲಿಷ್ಠ ಭಾರತದ ಅಡಿಪಾಯ ಎಂದರು.
Related

Rural families get solar power; 18.93 lakh beneficiaries have zero electricity bill, says Minister Pralhad Joshi

ಎರಡು ವರ್ಷಗಳೊಳಗೆ ಮೇಕೆದಾಟು ಯೋಜನೆಯನ್ನು ಪೂರ್ಣಗೊಳಿಸಿ: ಮುಖ್ಯಮಂತ್ರಿ ಚಂದ್ರು ಬಹಿರಂಗ ಪತ್ರ
