ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳಲ್ಲಿ ಕುರಿ/ಮೇಕೆ ಸಾಕಾಣಿಕೆ ಪ್ರೋತ್ಸಾಹಕ್ಕೆ ಸಂಪುಟ ಅನುಮೋದನೆ: ಸಚಿವ ಪ್ರಿಯಾಂಕ್ ಖರ್ಗೆ

1 मिनट में पढ़ें · अपडेट किया गया 12 व्यूज़
WhatsApp
ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳಲ್ಲಿ ಕುರಿ/ಮೇಕೆ ಸಾಕಾಣಿಕೆ ಪ್ರೋತ್ಸಾಹಕ್ಕೆ ಸಂಪುಟ ಅನುಮೋದನೆ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು 16: ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು ಉತ್ತೇಜಿಸಲು 2026-27ನೇ ಸಾಲಿನ ಆಯವ್ಯಯದಂತೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಡಿ ಪ್ರಸ್ತಾಪಿಸಲಾಗಿದ್ದ ಮಹತ್ವದ ಯೋಜನೆಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ ಒಟ್ಟು 9,777 ಅರ್ಹ ಫಲಾನುಭವಿಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿರುವ ಸಚಿವರು, ಆಯ್ಕೆಯಾದ ಫಲಾನುಭವಿಗಳಿಗೆ ಶೇ. 25 ರಷ್ಟು ಸರ್ಕಾರಿ ಸಹಾಯಧನದೊಂದಿಗೆ 10+1 ಕುರಿ/ಮೇಕೆ ಘಟಕಗಳನ್ನು ಸ್ಥಾಪಿಸಲು ಒಟ್ಟು ರೂ. 22.00 ಕೋಟಿ (ರೂ. 21,99,90,500) ಅನುದಾನವನ್ನು ಕಾಯ್ದಿರಿಸಲಾಗಿದೆ ಎಂದಿದ್ದಾರೆ.

ಪ್ರತಿ (10+1) ಕುರಿ/ಮೇಕೆ ಘಟಕಕ್ಕೆ ಸರ್ಕಾರದಿಂದ ರೂ. 22,500/- ಸಹಾಯಧನ ಸಿಗಲಿದ್ದು, ಈ ಯೋಜನೆಯನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ, ಎಂದು ಹೇಳಿದ್ದಾರೆ.

ಬರಗಾಲ ಪೀಡಿತ ಹಾಗೂ ಹಿಂದುಳಿದ ಪ್ರದೇಶಗಳ ನಿರುದ್ಯೋಗಿ ಯುವಕರು, ಭೂ ರಹಿತ ಕಾರ್ಮಿಕರು ಮತ್ತು ಆಸಕ್ತ ರೈತರಿಗೆ ಸ್ಥಿರ ಆದಾಯ ತಂದುಕೊಡಲು ಕುರಿ/ಮೇಕೆ ಸಾಕಾಣಿಕೆ ಪೂರಕವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ವಯಂ ಉದ್ಯೋಗಾವಕಾಶ ಸೃಷ್ಟಿಸುವುದು, ಮಾಂಸ ಹಾಗೂ ಉಣ್ಣೆ ಉತ್ಪಾದನೆ ಹೆಚ್ಚಿಸುವುದು ಮತ್ತು ಗ್ರಾಮೀಣ ಜೀವನಶೈಲಿ ಹಾಗೂ ಆರ್ಥಿಕತೆಯನ್ನು ಬಲಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ವಿವರಿಸಿದ್ದಾರೆ.

विज्ञापन
AdSense · in-feed

संबंधित लेख