10 ಆಗಸ್ಟ್ 2026: ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಬಿಡದಿ ಟೌನ್‌ಶಿಪ್ ಪಾದಯಾತ್ರೆ ಮೂಲಕ ಸರ್ಕಾರ ತಡೆಯೊಡ್ಡಿರುವ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅತ್ಯಂತ ಹೇಯ ಕೃತ್ಯ ಎಸಗಲು ಮುಂದಾಗಿದೆ ಎಂದು ದೂರಿದರು. ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸೋಮವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು; ನಾನು ಪೊಲೀಸ್ ಅಧಿಕಾರಿಗಳ ಬಗ್ಗೆ ಮಾತನಾಡಲ್ಲ. ಭಾನುವಾರ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಭೂಮಿ ನೀಡುವುದಕ್ಕೆ ಯಾರಿಗೂ ಬಲವಂತ ಇಲ್ಲ ಎಂದಿದ್ದಾರೆ. ಹಾಗಿದ್ದ ಮೇಲೆ ಪಾದಯಾತ್ರೆಯನ್ನು ಯಾಕೆ ತಡೆದರು ಎಂದು ಖಾರವಾಗಿ ಪ್ರಶ್ನಿಸಿದದರು. ಇದು ನಿಗೂಢ ಪ್ರಶ್ನೆ. ಇಂದು ಸುಮಾರು 35-40 ಸಾವಿರ ಖಾಲಿ ನಿವೇಶನಗಳು ಬಿಡಿಎ ವ್ಯಾಪ್ತಿಯಲ್ಲಿವೆ. ಅವುಗಳನ್ನು ಖರೀದಿ ಮಾಡುವವರು ಇಲ್ಲ. ಹೀಗಿರುವಾಗ ಯಾರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆಯೋ ಅವರಿಗೆ ತೊಂದರೆ ಕೊಡುವುದು, ಅವರನ್ನು ಬೀದಿ ಪಾಲು ಮಾಡುವುದು ಎಷ್ಟು ಸರಿ? ಯಾರಿಗಾಗಿ ಈ ಟೌನ್‌ಶಿಪ್ ಮಾಡುತ್ತಿದ್ದೀರಿ ಎಂದು ಆಕ್ರೋಶ ಹೊರ ಹಾಕಿದರು.ಹೋರಾಟ ಕೇವಲ ಒಕ್ಕಲಿಗರಿಗಾಗಿ ಅಲ್ಲ, ಸಾಕಷ್ಟು ಹಿಂದುಳಿದ ಸಣ್ಣ ಸಮುದಾಯಗಳಿವೆ. ಅವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಆಗಬಾರದು ಎಂದ ಅವರು; ಸರ್ಕಾರದ ಕಡೆಯಿಂದ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ. ನಾಳೆ ಬೆಂಗಳೂರಿಗೆ ಹೊಗ್ತೇನೆ. ನಿಖಿಲ್ ಕುಮಾರಸ್ವಾಮಿ ಹಾಗೂ ನಮ್ಮ ಪಕ್ಷದ ಇತರ ನಾಯಕರಿಂದ ಮಾಹಿತಿ ಪಡೆಯುತ್ತೇನೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಗಸ್ಟ್ 18ರಂದು ಸಭೆ ನಡೆಸಲು ತೀರ್ಮಾನ ಮಾಡಲಾಗಿದೆ. ಅಂದು ಎಲ್ಲಾ ವಿಚಾರಗಳನ್ನು ಮಾತನಾಡುತ್ತೇನೆ ಎಂದು ಗುಡುಗಿದರು.
ಈ ಹೋರಾಟದಿಂದ ಹಿಂದಿರುವ ಪ್ರಶ್ನೆ ಇಲ್ಲ. ರಾಜ್ಯ ಸರ್ಕಾರ ರೈತ ವಿರೋಧಿಯಾದ ಈ ಯೋಜನೆಯನ್ನು ಕೈಬಿಡಬೇಕು. ಫ್ರೀಡಂ ಪಾರ್ಕ್‌ನಲ್ಲಿ ಸಹಸ್ರಾರು ಕಾರ್ಯಕ್ರಮ ಮಾಡಿದ್ದಾರೆ, ನಾನೇ ಮಾಡಿದ್ದೇನೆ.
ಈ ಸರ್ಕಾರದವರು ಏನು ನಿರ್ಧಾರ ಮಾಡುತ್ತಾರೋ, ಅದನ್ನು ನೋಡಿಕೊಂಡು ಆ ನಂತರ ನಾವು ತೀರ್ಮಾನ ಮಾಡ್ತೇವೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.
ಮೂರು ವರ್ಷ ನೀವೇ ಡಿಸಿಎಂ ಆಗಿರಲಿಲ್ಲವೇ? ಬೆಂಗಳೂರನ್ನು ಐದು ಕಾರ್ಪೊರೇಷನ್ ಮಾಡಿದ್ದು ನೀವೇ ಅಲ್ಲವೇ? ಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನು ಇಳಿಸಿ ಒಂದೇ ತಿಂಗಳಿಗೆ ಈ ಪ್ರಾಜೆಕ್ಟ್ ಯಾಕೆ ಮಾಡುತ್ತಿದ್ದೀರಿ ಎಂದು ಮಾಜಿ ಪ್ರಧಾನಿಗಳು ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದರು.
ದೆಹಲಿ ನಾಯಕರಿಗೆ ಕೊಟ್ಟ ಮಾತಿನಂತೆ ತರಾತುರಿಯಲ್ಲಿ ಈ ಯೋಜನೆ ಮಾಡಲು ಹೊರಟಿದ್ದೀರಿ ಆರೋಪಿಸಿದ ಅವರು; ಏನೇ ಆಗಲಿ, ಬಡವರ ಪರವಾಗಿ ನಾವು ಈ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು.