ಕಾವೇರಿ ನೀರಿನ ವಿಚಾರ; ಕಾನೂನು ತಜ್ಞರು, ವಿರೋಧ ಪಕ್ಷಗಳ ಸಲಹೆ ಬಳಿಕ ಮುಂದಿನ ತೀರ್ಮಾನ: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: “ನಾನು ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ಪಡೆದು, ರಾಜ್ಯದ ಹಿತಕ್ಕೆ ಅವರ ಸಲಹೆ ಪಡೆಯುತ್ತೇವೆ. ಸರ್ವಪಕ್ಷ ಸಭೆಯಲ್ಲಿ ಅವರು ಬರಲಿ, ಅವರ ಸಲಹೆ ನೀಡಲಿ. ರಾಜ್ಯದ ಹಿತಕ್ಕೆ ನಾವು ಬದ್ಧರಾಗೋಣ. " ಎಂದು ಮುಖ್ಯ ಮಂತ್ರಿ ಡಿ . ಕೆ. ಶಿವಕುಮಾರ್ ಅವರು ಇಂದು ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದ್ದಾರೆ.
ಜುಲೈ ಅಂತ್ಯದವರೆಗೆ ನಾವು ತಮಿಳುನಾಡಿಗೆ 0.6 ಟಿಎಂಸಿ ನೀರನ್ನು ಮಾತ್ರ ತಮಿಳುನಾಡಿಗೆ ಹರಿಸಿದ್ದು, ಕಳೆದ 100 ವರ್ಷಗಳಲ್ಲಿ ತಮಿಳುನಾಡಿಗೆ ಹರಿಸಲಾಗಿರುವ ಅತ್ಯಂತ ಕಡಿಮೆ ಪ್ರಮಾಣದ ನೀರಾಗಿದೆ. ಇದುವರೆಗೂ ಹರಿದಿರುವ ನೀರು ಅಣೆಕಟ್ಟುಗಳಿಂದ ಬಿಟ್ಟಿರುವ ನೀರಲ್ಲ, ಬೆಂಗಳೂರು ಸುತ್ತಮುತ್ತ ಬಿದ್ದ ಮಳೆ ನೀರು ಹರಿದು ಹೋಗಿರುವ ನೀರಿನ ಪ್ರಮಾಣ. ಇಷ್ಟಾದರೂ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಮಧ್ಯೆ ಆಗಸ್ಟ್ 13ರಂದು ಬಂದ್ ಗೆ ಕರೆ ನೀಡುವ ಬಗ್ಗೆ ಚರ್ಚೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನಾವೇ ನಿಮ್ಮ ಪರವಾಗಿದ್ದು, ಬಂದ್ ಮಾಡುವ ಅಗತ್ಯವಿಲ್ಲ. ಇದರಿಂದ ಯಾವುದೇ ಪರಿಹಾರ ಸಿಗುವುದಿಲ್ಲ” ಎಂದು ತಿಳಿಸಿದರು.
ತಮಿಳುನಾಡಿಗೆ ಕೂಡಲೇ ನೀರು ಹರಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ “ನಮ್ಮ ಮೇಲ್ಮನವಿ ತಿರಸ್ಕಾರಗೊಂಡಿದೆ. ಮುಂದೆ ಏನು ಮಾಡಬೇಕು ಎಂದು ಸರ್ವಪಕ್ಷ ಸಭೆ ಕರೆಯಲಾಗಿದೆ. ಸಭೆ ಬಳಿಕ ತೀರ್ಮಾನ ಮಾಡಲಾಗುವುದು” ಎಂದು ತಿಳಿಸಿದರು.
“ವಿರೋಧ ಪಕ್ಷದ ನಾಯಕರು ಮಾಧ್ಯಮಗಳ ಮೂಲಕ ಅನೇಕ ಮಾರ್ಗದರ್ಶನ ನೀಡಿದ್ದಾರೆ. ನಾವು ಮೇಲ್ಮನವಿ ಸಲ್ಲಿಸುವ ಮುನ್ನ ಕೇಂದ್ರ ಸಂಸದರು ಹಾಗೂ ಕೇಂದ್ರ ಸಚಿವರ ಸರ್ವಪಕ್ಷ ಸಭೆ ಮಾಡಿದ್ದೆ. ಎಲ್ಲಾ ಪಕ್ಷದ ಸಂಸದರು ಬಹಳ ಗೌರವದಿಂದ ರಾಜ್ಯದ ನೆಲ, ಜಲ ವಿಚಾರದಲ್ಲಿ ಸಭೆಯಲ್ಲಿ ಭಾಗವಹಿಸಿ ಚರ್ಚೆ ಮಾಡಿದ್ದಾರೆ. 3 ಕೇಂದ್ರ ಸಚಿವರು ಸೇರಿದಂತೆ 36 ಸಂಸದರು ಭಾಗವಹಿಸಿದ್ದರು. ನಾನು ಪ್ರಹ್ಲಾದ್ ಜೋಷಿ ಹಾಗೂ ಸಂಸದರ ಜತೆ ಚರ್ಚೆ ಮಾಡಿದ್ದೆ. ನಮ್ಮ ಮೇಲ್ಮನವಿ ಅರ್ಜಿಯನ್ನು ನಾವು ಜೋಷಿ ಅವರು, ಸೋಮಣ್ಣ ಹಾಗೂ ಶೋಭ ಕರಂದ್ಲಾಜೆ ಅವರಿಗೆ ಕಳುಹಿಸಿಕೊಟ್ಟಿದ್ದೆ. ಅವರು ಕೂಡ ತಮ್ಮ ಪ್ರಯತ್ನ ಮಾಡಿದ್ದಾರೆ. ಅವರು ಕೇಂದ್ರ ಸಚಿವರ ಮೇಲೆ ಒತ್ತಡ ಹಾಕಿದ್ದಾರೆ” ಎಂದರು.
ಕಳೆದ 2-3 ದಿನಗಳಿಂದ ನಮ್ಮಲ್ಲಿ ಒಳಹರಿವು ಹೆಚ್ಚಾಗಿದೆ.
“ತಮಿಳುನಾಡಿನವರು 9.94 ಟಿಎಂಸಿ ನೀರನ್ನು ಹರಿಸಬೇಕು ಎಂದು ವಾದ ಮಂಡಿಸಿದ್ದರು. ಆದರೆ ಸಮಿತಿಯು ಅದರಲ್ಲಿ ಅರ್ಧದಷ್ಟು ಪ್ರಮಾಣದ ನೀರು ಹರಿವಿಗೆ ಸೂಚಿಸಿದ್ದಾರೆ. ಕಳೆದ 2-3 ದಿನಗಳಿಂದ ನಮ್ಮಲ್ಲಿ ಒಳಹರಿವು ಹೆಚ್ಚಾಗಿದೆ. ಈ ವಿಚಾರವಾಗಿ ಚರ್ಚೆ ಮಾಡಲು ಎಲ್ಲಾ ಮಾಜಿ ಮುಖ್ಯಮಂತ್ರಿಗಳು ಹಾಗೂ ಕಾವೇರಿ ಭಾಗದ ಎಲ್ಲಾ ಪಕ್ಷಗಳ ಶಾಸಕರು, ಸಂಸತ್ ಸದಸ್ಯರಿಗೆ ಭಾನುವಾರ ಸರ್ವಪಕ್ಷ ಸಭೆ ಕರೆಯಲಾಗಿದೆ. ಕಾನೂನು ತಂಡದ ಜೊತೆಗೆ ನಾನು, ಪರಮೇಶ್ವರ್, ರಾಮಲಿಂಗಾ ರೆಡ್ಡಿ ಅವರು ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ಸರ್ವಪಕ್ಷ ಸಭೆಯಲ್ಲಿ ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಅಭಿಪ್ರಾಯ ಮಂಡಿಸಿ, ನಂತರ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಬಿಜೆಪಿಯ ಸಂಸದರು, ಕೇಂದ್ರ ಸಚಿವರು ನಮಗೆ ಸಹಕಾರ ನೀಡಿದ್ದಾರೆ. ಇಲ್ಲಿ ಕೆಲವರು ವಿರೋಧ ಮಾಡಿರಬಹುದು, ನಾನು ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ರಾಜ್ಯದ ಹಿತವನ್ನು ಅವರು ಕಾಪಾಡುತ್ತಾರೆ ಎಂದು ಭಾವಿಸಿದ್ದೇನೆ”
100 ವರ್ಷಗಳಲ್ಲಿ ಈ ವರ್ಷವೇ ತಮಿಳುನಾಡಿಗೆ ಅತಿ ಕಡಿಮೆ ನೀರು (ಜುಲೈ ಅಂತ್ಯದ ವೇಳೆಗೆ) ಬಿಟ್ಟಿದ್ದೇವೆ
ತಮಿಳುನಾಡಿನವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೆ ಎಂದು ಕೇಳಿದಾಗ, “ಈಗ ನಾವು ಅದರ ಬಗ್ಗೆ ಯಾಕೆ ಯೋಚನೆ ಮಾಡಬೇಕು” ಎಂದು ತಿಳಿಸಿದರು.
ನಮ್ಮ ರಾಜ್ಯದಿಂದ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗುವುದೇ ಎಂದು ಕೇಳಿದಾಗ, “ದೆಹಲಿ ಕಾನೂನು ತಜ್ಞರ ಸಲಹೆ, ಸರ್ವಪಕ್ಷ ಸಭೆಯಲ್ಲಿ ಮಾಜಿ ಸಿಎಂಗಳು ಹಾಗೂ ವಿರೋಧ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ಪಡೆಯದೇ ಯಾವುದೇ ತೀರ್ಮಾನ ಮಾಡುವುದಿಲ್ಲ” ಎಂದು ತಿಳಿಸಿದರು.
ಕುಡಿಯುವ ನೀರಿಗೆ ಸಮಸ್ಯೆಯಾಗುವುದಿಲ್ಲವೇ ಎಂದು ಕೇಳಿದಾಗ, “ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಇದಕ್ಕೆ 40 ಟಿಎಂಸಿ ನೀರಿನ ಅಗತ್ಯವಿದ್ದು, 36 ಟಿಎಂಸಿ ಕುಡಿಯಲು ಹಾಗೂ 4 ಟಿಎಂಸಿ ನೀರು ಆವಿಯಾಗುವ ಸಾಧ್ಯತೆ ಇರುತ್ತದೆ. ಉಳಿದಂತ ಹೆಚ್ಚುವರಿ ನೀರನ್ನು ಸಂಕಷ್ಟದ ಪರಿಸ್ಥಿತಿಯಲ್ಲಿ ನೀರುಹಂಚಿಕೆ ಸೂತ್ರದ ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು ನಮ್ಮ ಕಾನೂನು ತಜ್ಞರ ತಂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ” ಎಂದು ತಿಳಿಸಿದ್ದಾ ರೆ .
ರಾಜ್ಯದ ಹಿತ ಕಾಯಲು ನಾವು ಬದ್ಧ, ಬಂದ್ ಮಾಡುವುದರಿಂದ ಪರಿಹಾರ ಸಿಗಲ್ಲ
“ಬಂದ್, ಪ್ರತಿಭಟನೆಗಳಿಂದ ಜನರಿಗೆ ತೊಂದರೆ ಆಗಬಾರದು ಎಂದು ನ್ಯಾಯಾಲಯದ ತೀರ್ಮಾನಗಳಿದ್ದು, ಈ ಬಂದ್ ಮಾಡಬಾರದ ಎಂದು ಸರ್ಕಾರದ ಪರವಾಗಿ ನಮ್ರತೆಯಿಂದ ಮನವಿ ಮಾಡಿಕೊಳ್ಳುತ್ತೇನೆ. ರಾಜ್ಯದ ಹಿತದ ವಿರುದ್ಧವಾಗಿ ನಾವು ಕೆಲಸ ಮಾಡುವುದಿಲ್ಲ. ವಿರೋಧ ಪಕ್ಷದ ನಾಯಕರು ರಾಜ್ಯದಲ್ಲಿ ಆಡಳಿತ ಮಾಡಿದ್ದಾರೆ. ನಿಮ್ಮ ಕಾಲದಲ್ಲಿ ನೀವು ಅನೇಕ ತೀರ್ಮಾನ ಮಾಡಿದ್ದೀರಿ. ನಾಗೇಗೌಡರು, ಜೆ ಹೆಚ್ ಪಟೇಲರು ನೀರಾವರಿ ಮಂತ್ರಿಯಾಗಿದ್ದಾಗ, ದೇವೇಗೌಡರು ಪ್ರಧಾನಿಯಾಗಿದ್ದಾಗ ಅನೇಕ ತೀರ್ಮಾನ ಮಾಡಲಾಗಿತ್ತು, ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ, ಅದರ ಅಗತ್ಯವೂ ಇಲ್ಲ” ಎಂದು ತಿಳಿಸಿದರು.
संबंधित लेख

ಪರಿಸ್ಥಿತಿ ತಿಳಿಯಾದ ಬಳಿಕ ತಮಿಳುನಾಡು ಸಿಎಂ ವಿಜಯ್ ಅವರ ಜೊತೆ ಸಭೆ: ಸಿ. ಎಂ. ಡಿ. ಕೆ. ಶಿವಕುಮಾರ್

ರೈತರ ಪರವಾಗಿ ಹೋರಾಟ ಮುಂದುವರೆಯಲಿದೆ: ಕೆ ಆರ ಎಸ್ ಮಂಡ್ಯ - ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿ.ಜೆ.ಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ರೋಶ
