ಹೊರ ವರ್ತುಲ ರಸ್ತೆ ಸುಧಾರಣೆ: ಹಿರಿಯ ಅಧಿಕಾರಿಗಳೊಂದಿಗೆ ಕೃಷ್ಣ ಬೈರೇಗೌಡ ಉನ್ನತ ಮಟ್ಟದ ಸಭೆ

ಬೆಂಗಳೂರು: ರಾಜಧಾನಿಯ ಅತ್ಯಂತ ಪ್ರಮುಖ ವಾಹನ ಸಾಂದ್ರತೆಯ ಮಾರ್ಗವಾಗಿರುವ ಹೊರ ವರ್ತುಲ ರಸ್ತೆಯ (ORR) ಮೂಲಸೌಕರ್ಯ ಸುಧಾರಣೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಉನ್ನತ ಮಟ್ಟದ ಸಭೆ ನಡೆಸಿದರು.
ಸಭೆಯಲ್ಲಿ ಸಚಿವರು ಹೊರ ವರ್ತುಲ ರಸ್ತೆಯ ಅಭಿವೃದ್ಧಿ ಹಾಗೂ ಸುಗಮ ಸಂಚಾರಕ್ಕಾಗಿ ಹಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಸಭೆಯ ಪ್ರಮುಖ ನಿರ್ಧಾರಗಳು ಮತ್ತು ಸೂಚನೆಗಳು:
ಪಾದಚಾರಿ ಮಾರ್ಗ ನಿರ್ಮಾಣ: ರಸ್ತೆಯ ಇಕ್ಕೆಲಗಳಲ್ಲಿ ಕನಿಷ್ಠ 3 ಮೀಟರ್‌ಗಳಷ್ಟು ವಿಸ್ತಾರದ 'ಎಂಡ್ ಟು ಎಂಡ್' ಪಾದಚಾರಿ ಮಾರ್ಗವನ್ನು ಕಡ್ಡಾಯವಾಗಿ ನಿರ್ಮಿಸಬೇಕು. ಸರ್ವೀಸ್ ಹಾಗೂ ಸ್ಲಿಪ್ ರಸ್ತೆಗಳಲ್ಲಿ ಕನಿಷ್ಠ 1.8 ಮೀಟರ್‌ವರೆಗೆ ಪಾದಚಾರಿ ಹಾದಿ ನಿರ್ಮಿಸಲು ಸೂಚಿಸಲಾಯಿತು.
ಒತ್ತುವರಿ ತೆರವು ಹಾಗೂ ಟ್ರಾನ್ಸ್‌ಫಾರ್ಮರ್ ಸ್ಥಳಾಂತರ: ರಸ್ತೆ ಬದಿಯಲ್ಲಿರುವ ಸಂಪೂರ್ಣ ಅಕ್ರಮ ಒತ್ತುವರಿಗಳನ್ನು ತಕ್ಷಣವೇ ತೆರವುಗೊಳಿಸಬೇಕು. ಸಾರ್ವಜನಿಕ ಸ್ಥಳಗಳನ್ನು ಅಕ್ರಮವಾಗಿ ಅತಿಕ್ರಮಿಸಿ ಖಾಸಗಿಯವರು ಅಳವಡಿಸಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ಗುರುತಿಸಿ ತೆರವುಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಬಸ್ ಬೇ ಹಾಗೂ ಪಿಕ್-ಅಪ್ ಪಾಯಿಂಟ್ಸ್:
ಮುಖ್ಯ ರಸ್ತೆಯಲ್ಲಿ ಸುಗಮ ಬಸ್ ಸಂಚಾರಕ್ಕಾಗಿ 'ಬಸ್ ಬೇ' (Bus Bay) ನಿರ್ಮಿಸುವುದು.
ಸರ್ವೀಸ್ ರಸ್ತೆಗಳಲ್ಲಿ ಹೆಚ್ಚುವರಿ ಜಾಗ (ಬಫರ್ ಜಾಗ) ಸಿಗುವ ಸ್ಥಳಗಳಲ್ಲಿ ಟ್ಯಾಕ್ಸಿ ಹಾಗೂ ಬಸ್‌ಗಳಿಗೆ ಪ್ರತ್ಯೇಕ ಡ್ರಾಪ್ ಮತ್ತು ಪಿಕ್-ಅಪ್ ವಲಯಗಳನ್ನು ನಿರ್ಮಿಸಿ, ಅವುಗಳಿಗೆ ಪ್ರತ್ಯೇಕ 'ಕಲರ್ ಕೋಡಿಂಗ್' ಮಾಡುವುದು.
ಶೇ. 50 ರಷ್ಟು WFH ಮತ್ತು ವೈಟ್ ಟಾಪಿಂಗ್ ಕಾಮಗಾರಿ: ಹೊರ ವರ್ತುಲ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿಯನ್ನು ಅಕ್ಟೋಬರ್‌ನಲ್ಲಿ ಆರಂಭಿಸಿ, ಜನವರಿ ವೇಳೆಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಕಾಮಗಾರಿ ಅವಧಿಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಐಟಿ-ಬಿಟಿ ಸಂಸ್ಥೆಗಳೊಂದಿಗೆ ಚರ್ಚಿಸಿ, ಶೇ. 50 ರಷ್ಟು ಉದ್ಯೋಗಿಗಳಿಗೆ 'ವರ್ಕ್ ಫ್ರಮ್ ಹೋಮ್' (WFH) ನೀಡುವಂತೆ ಮನವೊಲಿಸಲು ಅಧಿಕಾರಿಗಳಿಗೆ ತಿಳಿಸಲಾಯಿತು.
ಆಂತರಿಕ ರಸ್ತೆಗಳ ಬಳಕೆ: ಮುಖ್ಯ ರಸ್ತೆಯ ಮೇಲಿನ ವಾಹನ ಒತ್ತಡ ಕಡಿಮೆ ಮಾಡಲು ಪರ್ಯಾಯ ಆಂತರಿಕ ರಸ್ತೆಗಳನ್ನು (Internal Roads) ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸೂಚಿಸಲಾಯಿತು.
ಸಮಗ್ರ ಸಮಾಲೋಚನೆ: ಈ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಲು ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ (ORRCA) ಹಾಗೂ ಸಂಚಾರ ಪೊಲೀಸ್ ಇಲಾಖೆಯೊಂದಿಗೆ ಸಮಾಲೋಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು.
ಸಚಿವರು ಈ ಎಲ್ಲಾ ಪ್ರಕ್ರಿಯೆಗಳನ್ನು ಕಾಲಮಿತಿಯೊಳಗೆ ಅಂತಿಮಗೊಳಿಸಿ, ತಕ್ಷಣವೇ ಕಾರ್ಯರೂಪಕ್ಕೆ ತರುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಪ್ರಮುಖರು: ಈ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಎಲ್.ಕೆ. ಅತೀಕ್, ಬಿಬಿಎಂಪಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ವಿಶೇಷ ಆಯುಕ್ತರಾದ ನಿತೀಶ್, ಸಂಚಾರ ವಿಭಾಗದ ಡಿಸಿಪಿ ಶಾಹಿಲ್ ಬಾಗ್ಲಾ, ಬಿ-ಸ್ಮೈಲ್ ತಾಂತ್ರಿಕ ನಿರ್ದೇಶಕರಾದ ಪ್ರಹ್ಲಾದ್ ಹಾಗೂ ವಿವಿಧ ವಿಭಾಗಗಳ ಮುಖ್ಯ ಅಭಿಯಂತರರು ಮತ್ತು ಕಾರ್ಯಪಾಲಕ ಅಭಿಯಂತರರು ಉಪಸ್ಥಿತರಿದ್ದರು.
संबंधित लेख

ಕರ್ನಾಟಕ ಸಚಿವರಿಗೆ ಖಾತೆ ಹಂಚಿಕೆ: ಡಿ.ಕೆ. ಶಿವಕುಮಾರ್ಗೆ ಪ್ರಮುಖ ಖಾತೆಗಳ ಹೊಣೆ

ಸರ್ಕಾರಿ ನೌಕರರೊಂದಿಗೆ ಸಂವಾದ: 750 ಕಡೆ 2.50 ಲಕ್ಷ ಅಧಿಕಾರಿಗಳು, ನೌಕರರು ಭಾಗಿ

