ಎಕ್ಸ್ನಲ್ಲಿ ಕಿಡಿ, ರಾಜಕೀಯದಲ್ಲಿ ಕಿಚ್ಚು: ಕುಮಾರಸ್ವಾಮಿ–ಖರ್ಗೆ ಸಂಘರ್ಷಕ್ಕೆ ಹೊಸ ತಿರುವು

ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ನಡೆದಿದೆ ಎನ್ನಲಾದ ಸ್ಟಿಂಗ್ ಕಾರ್ಯಾಚರಣೆಯ ಕುರಿತು ತನಿಖೆ ನಡೆಸಬೇಕೆಂಬ ಬೇಡಿಕೆ ಇದೀಗ ಆಡಳಿತಾರೂಢ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ರಾಜಕೀಯ ಸಂಘರ್ಷದ ಪ್ರಮುಖ ವಿಷಯವಾಗಿದೆ.
ಒಂದೆಡೆ, ಸ್ಟಿಂಗ್ ಪ್ರಕರಣದ ಕುರಿತು ಕಾನೂನುಬದ್ಧ ತನಿಖೆ ನಡೆಯಬೇಕು ಮತ್ತು ಆರೋಪಗಳಿಗೆ ಸಾಕ್ಷ್ಯಾಧಾರಗಳು ಅಗತ್ಯ ಎಂಬ ನಿಲುವನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ತನಿಖೆಯ ಹೆಸರಿನಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಗುರಿಯಾಗಿಸಲಾಗುತ್ತಿದೆ ಮತ್ತು ಪ್ರಕರಣದ ಹಿಂದಿರುವ ಪ್ರಮುಖ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಕುಮಾರಸ್ವಾಮಿ ಅವರ ಆರೋಪವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ವಾಕ್ಸಮರ ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲಿಯೂ. (ಎಕ್ಸ್ ಖಾತೆಯಲ್ಲಿ) ಮಾತಿನ ಸಂಗ್ರಾಮ ಬಿಸಿ ಏರುತ್ತಿದೆ.
ಪ್ರಿಯಾಂಕ್ ಖರ್ಗೆ ಯ ದೃಷ್ಟಿಯಲ್ಲಿ ಆರ್ ಎಸ್ ಎಸ್ ನ ನೀಲಿಕಣ್ಣಿನ ಹುಡುಗ:
ಪ್ರಿಯಾಂಕ್ ಖರ್ಗೆ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, "ಆರ್ಎಸ್ಎಸ್ನ ಹೊಸ ನೀಲಿಗಣ್ಣಿನ ಹುಡುಗ ಮಾಧ್ಯಮಗಳ ಮುಂದೆ ತನಿಖೆಗೆ ಆಗ್ರಹಿಸುತ್ತಾನೆ; ತನಿಖೆ ಆರಂಭವಾದ ಕೂಡಲೇ ಆಯುಕ್ತರ ಬಳಿ ಓಡಿ ಹೋಗಿ ನನ್ನ ಹುಡುಗರನ್ನು ತನಿಖೆ ಮಾಡಬೇಡಿ ಎಂದು ಅಂಗಲಾಚುತ್ತಾನೆ".ಎಂಬರ್ಥದ ಪೋಸ್ಟ್ ಪ್ರಕಟಿಸಿದ್ದರು.
ಇದರ ಮೂಲಕ ಕುಮಾರಸ್ವಾಮಿ ಅವರ ನಿಲುವನ್ನು ಟೀಕಿಸಿದ್ದ ಖರ್ಗೆ, ಇತರರ ವಿಚಾರದಲ್ಲಿ ಹೊಣೆಗಾರಿಕೆಯನ್ನು ಆಗ್ರಹಿಸುವವರು ತಮ್ಮವರ ವಿಚಾರ ಬಂದಾಗ ವಿನಾಯಿತಿ ಬಯಸುತ್ತಾರೆ ಎಂಬ ಆರೋಪ ಮಾಡಿದ್ದರು.
ಈ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿ, ಸ್ಟಿಂಗ್ ಪ್ರಕರಣದ ತನಿಖೆಯ ದಿಕ್ಕಿನ ಬಗ್ಗೆಯೇ ಪ್ರಶ್ನೆಗಳನ್ನು ಎತ್ತಿದ್ದಾರೆ.
‘ಗೃಹಮಂತ್ರಿ ಹುದ್ದೆಗೆ ನೀವು ನಾಲಾಯಕ್’
ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ನಡೆದ ಸ್ಟಿಂಗ್ ಸಂಚಿನಲ್ಲಿ ಖರ್ಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರ ಪದಚ್ಯುತಿಗೆ ಕಾರಣವಾಗುವ ಉದ್ದೇಶದ ಸಂಚು ನಡೆದಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.
ಸ್ಟಿಂಗ್ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕಾದ ಗೃಹ ಸಚಿವರೇ ರಾಜಕೀಯ ಪಕ್ಷಪಾತದ ಆರೋಪಕ್ಕೆ ಗುರಿಯಾಗಿದ್ದಾರೆ ಎಂದು ಟೀಕಿಸಿರುವ ಕುಮಾರಸ್ವಾಮಿ, ಈ ಹಿನ್ನೆಲೆಯಲ್ಲಿ ಖರ್ಗೆ ಅವರು ಗೃಹಮಂತ್ರಿ ಹುದ್ದೆಗೆ ಅರ್ಹರಲ್ಲ ಎಂಬ ಕಟು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೀಸಲು ಕ್ಷೇತ್ರದ ವಿಚಾರ ಮುಂದಿಟ್ಟ ಕುಮಾರಸ್ವಾಮಿ:
ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ಮಾಡಿದ ಕುಮಾರಸ್ವಾಮಿ ಅವರು ಸ್ಟಿಂಗ್ ಪ್ರಕರಣಕ್ಕೆ ಸೀಮಿತವಾಗದೆ, ಪ್ರಿಯಾಂಕ್ ಖರ್ಗೆ ಅವರ ರಾಜಕೀಯ ಹಿನ್ನೆಲೆ ಹಾಗೂ ಮೀಸಲು ಕ್ಷೇತ್ರದ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ.
ಸಿದ್ದಾರ್ಥ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರುಗಳನ್ನು ಉಲ್ಲೇಖಿಸಿ, ದಲಿತರ ಹೆಸರಿನಲ್ಲಿ ರಾಜಕೀಯ ಅಧಿಕಾರ ಅನುಭವಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ತಮ್ಮ ಮೀಸಲು ಕ್ಷೇತ್ರವನ್ನು ದುರ್ಬಲ ದಲಿತ ಅಭ್ಯರ್ಥಿಗೆ ಬಿಟ್ಟುಕೊಟ್ಟು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಬರಲಿ ಎಂಬ ಸವಾಲನ್ನೂ ಹಾಕಿದ್ದಾರೆ.
ಇದರೊಂದಿಗೆ, ದಲಿತ ಸಮುದಾಯದ ನಿಜವಾದ ಪ್ರಾತಿನಿಧ್ಯ ಮತ್ತು ರಾಜಕೀಯ ಅಧಿಕಾರ ಹಂಚಿಕೆಯ ವಿಚಾರವನ್ನು ರಾಜಕೀಯ ಚರ್ಚೆಯ ಕೇಂದ್ರಕ್ಕೆ ತರುವ ಪ್ರಯತ್ನವನ್ನು ಕುಮಾರಸ್ವಾಮಿ ಮಾಡಿದ್ದಾರೆ. ಈ ಹೇಳಿಕೆಗಳು ಅವರ ರಾಜಕೀಯ ಟೀಕೆಯ ಭಾಗವಾಗಿದ್ದು, ಸಂಬಂಧಿತ ಆರೋಪಗಳಿಗೆ ಸ್ವತಂತ್ರ ಪರಿಶೀಲನೆ ಅಗತ್ಯವಾಗಿದೆ.
‘ನನ್ನ ಹುಡುಗರನ್ನು ರಕ್ಷಿಸಿಕೊಳ್ಳುವುದು ನನಗೆ ಗೊತ್ತು’
ಜೆಡಿಎಸ್ ಕಾರ್ಯಕರ್ತರ ವಿರುದ್ಧದ ಪೊಲೀಸ್ ಕ್ರಮವನ್ನು ಪ್ರಶ್ನಿಸಿರುವ ಕುಮಾರಸ್ವಾಮಿ, ತಮ್ಮ ಪಕ್ಷದ ಕಾರ್ಯಕರ್ತರನ್ನು ರಕ್ಷಿಸಿಕೊಳ್ಳುವುದು ತಮಗೆ ಗೊತ್ತಿದೆ ಎಂದು ಹೇಳಿದ್ದಾರೆ.
"ನನ್ನ ಹುಡುಗರನ್ನು ರಕ್ಷಿಸಿಕೊಳ್ಳುವುದು ನನಗೆ ಗೊತ್ತು. ಓಡುವುದು ನನ್ನ ಜಾಯಮಾನವಲ್ಲ. ಅಂಗಲಾಚುವವನಲ್ಲ ಈ ಕುಮಾರಸ್ವಾಮಿ". ಎಂದು ಹೇಳುವ ಮೂಲಕ ಪ್ರಿಯಾಂಕ್ ಖರ್ಗೆ ಅವರ ಪೋಸ್ಟ್ಗೆ ನೇರ ತಿರುಗೇಟು ನೀಡಿದ್ದಾರೆ.
"ಕೆಪಿಎಸ್ಸಿ ನೇಮಕಾತಿ ಅಕ್ರಮಗಳ ವಿಚಾರವನ್ನು ತಾವು ಪ್ರಸ್ತಾಪಿಸಿದಾಗ ಎದುರಾಳಿಗಳು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದೂ ತಮಗೆ ತಿಳಿದಿದೆ " ಎಂದು ಅವರು ಹೇಳಿದ್ದಾರೆ. ಪೊಲೀಸ್ ಕಮಿಷನರ್ ಅವರ ಬಳಿ ತಾವು ಏನು ಮಾತನಾಡಿದ್ದೇನೆ ಎಂಬುದನ್ನು ತಿಳಿದುಕೊಳ್ಳುವಂತೆ ಖರ್ಗೆ ಅವರಿಗೆ ಸವಾಲು ಹಾಕಿದ್ದಾರೆ.
ಸ್ಟಿಂಗ್ ಪ್ರಕರಣದಲ್ಲಿ ತಮ್ಮನ್ನು ವಶಕ್ಕೆ ಪಡೆಯುವ ಅಥವಾ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆಯೇ, ತಮ್ಮ ವಿರುದ್ಧ ಕ್ರಮ ಕೈಗೊಳ್ಳುವುದಾದರೆ ಅದನ್ನು ಎದುರಿಸಲು ಸಿದ್ಧ ಎಂಬ ಸಂದೇಶವನ್ನೂ ಕುಮಾರಸ್ವಾಮಿ ನೀಡಿದ್ದಾರೆ.
ಸ್ಟಿಂಗ್ ಸಾಮ್ರಾಟನ ಸಿಂಡಿಕೇಟ್ನಲ್ಲಿ ನೀವೂ ಭಾಗ
ತಮ್ಮ ಹೇಳಿಕೆಯ ಕೊನೆಯಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿರುವ ಕುಮಾರಸ್ವಾಮಿ, ಸ್ಟಿಂಗ್ ಕಾರ್ಯಾಚರಣೆಗಳ ಮೂಲಕ ಪ್ರಭಾವ ಬೀರುವ ವ್ಯಕ್ತಿಗಳ ಜಾಲದಲ್ಲಿ ಸಚಿವರೂ ಭಾಗವಾಗಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
‘ಸ್ಟಿಂಗ್ ಸಾಮ್ರಾಟನ ಸಿಂಡಿಕೇಟ್ನಲ್ಲಿ ನೀವು ಒಂದು ಭಾಗ ಎಂಬುದು ನನಗೆ ಗ್ಯಾರಂಟಿ’ ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಲೇಖನಗಳು

ಕರ್ನಾಟಕ ರಾಜ್ಯ ನಾಗರಿಕ ವಿಮಾನಯಾನ ನೀತಿ–2026ಕ್ಕೆ ಸಚಿವ ಸಂಪುಟ ಅನುಮೋದನೆ

ರಿಂಗ್ ರೋಡ್ ಶುಭಾ ಕ್ಷಮಾದಾನ ಅರ್ಜಿ ತಿರಸ್ಕರಿಸುವಂತೆ ಶಿಫಾರಸು ಮಾಡಿದ ಸಚಿವ ಸಂಪುಟ

