ಪರಿಸ್ಥಿತಿ ತಿಳಿಯಾದ ಬಳಿಕ ತಮಿಳುನಾಡು ಸಿಎಂ ವಿಜಯ್ ಅವರ ಜೊತೆ ಸಭೆ: ಸಿ. ಎಂ. ಡಿ. ಕೆ. ಶಿವಕುಮಾರ್

3 ನಿಮಿಷ ಓದು · ನವೀಕರಿಸಲಾಗಿದೆ 6 ವೀಕ್ಷಣೆ
WhatsApp
ಪರಿಸ್ಥಿತಿ ತಿಳಿಯಾದ ಬಳಿಕ ತಮಿಳುನಾಡು ಸಿಎಂ ವಿಜಯ್ ಅವರ ಜೊತೆ ಸಭೆ: ಸಿ. ಎಂ. ಡಿ. ಕೆ. ಶಿವಕುಮಾರ್

ಬೆಂಗಳೂರು:ಸೌಹಾರ್ದತೆ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಹಾಗಾಗಿ ತಮಿಳು ನಾಡಿನ ಸಿ. ಎಂ ವಿಜಯ್ ಅವರೊಂದಿಗೆ ಚರ್ಚೆ ಮಾಡಲಿದ್ದೇವೆ . ಎಂದು ಇಂದು ಡಿ. ಕೆ. ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ಆಗಸ್ಟ್ 3ರಂದು ತಮಿಳನಾಡು ಸಿಎಂ ಬರುವ ತೀರ್ಮಾನವಾಗಿತ್ತು. ಈ ಹಿಂದೆ ನಾನೇ ತಮಿಳುನಾಡಿಗೆ ಹೋಗಲು ಮನವಿ ಮಾಡಿದ್ದೆ ಆದರೆ ಡಿಎಂಕೆ ಸರ್ಕಾರ ಅನುಮತಿ ನೀಡಿರಲಿಲ್ಲ, ನಂತರ ಚುನಾವಣೆ ಬಂದು ಸರ್ಕಾರ ಬದಲಾಗಿದೆ. ಈಗ ವಿಜಯ್ ಅವರು ತಮ್ಮ ತಂಡದೊಂದಿಗೆ ಕರ್ನಾಟಕ್ಕೆ ಬರುವುದಾಗಿ ತಿಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಭಟನೆ ಮಾಡುವ ಬೆಳವಣಿಗೆ ನಮಗೆ ಸಮಾಧಾನ ತರುತ್ತಿಲ್ಲ. ಈ ವಿಚಾರವನ್ನು ಸೌಹಾರ್ದತೆ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು.

ಸಮಸ್ಯೆ ಬಗೆಹರಿದರೆ ಅವರಿಗೂ ಹಿತ, ನಮಗೂ ಹಿತ. ಈಗ ಪರಿಸ್ಥಿತಿ ಉತ್ತಮವಾಗಿಲ್ಲ, ಹೀಗಾಗಿ ನಮ್ಮ ಸಭೆಯನ್ನು ಕೆಲ ದಿನಗಳ ಕಾಲ ಮುಂದೂಡೋಣ ಎಂದು ನಾನು ತಮಿಳುನಾಡು ಮುಖ್ಯಮಂತ್ರಿಗಳಿಗೆ ಮನವಿ ಮಾಡಲು ಚರ್ಚೆ ಮಾಡುತ್ತೇನೆ. ಹೊರಗಿನಿಂದ ಅತಿಥಿಗಳು ಬರುವಾಗ ನಾವು ಸೌಹಾರ್ದತೆ ಹಾಗೂ ಗೌರವಪೂರ್ವಕವಾಗಿ ಆತಿಥ್ಯವಹಿಸಬೇಕು. ಹೀಗಾಗಿ ಆಗಸ್ಟ್ 3ರ ಬದಲು ಬೇರೆ ದಿನಾಂಕ ನಿಗದಿ ಮಾಡಿ ಮನವಿ ಮಾಡುತ್ತೇನೆ. ಅವರು ಅವರ ರಾಜ್ಯದ ಹಿತ ಕಾಪಾಡುವ ಉದ್ದೇಶವಿದ್ದರೆ, ನಮಗೆ ನಮ್ಮ ರಾಜ್ಯದ ಹಿತ ಕಾಪಾಡುವ ಉದ್ದೇಶವಿದೆ. ಸೌಹಾರ್ದತೆಯಿಂದ ಇದನ್ನು ಬಗೆಹರಿಸಿಕೊಳ್ಳಲು ಸಾಧ್ಯವೇ ಎಂದು ಚರ್ಚೆ ಮಾಡಲಾಗುತ್ತಿದೆ” ಎಂದು ತಿಳಿಸಿದರು.

ನಾನು ಅಧಿಕಾರ ವಹಿಸಿಕೊಂಡ ಬಳಿಕ ಕೇಂದ್ರ ಜಲಶಕ್ತಿ ಸಚಿವರಾದ ಸಿ ಆರ್ ಪಾಟೀಲ್ ಅವರ ನೇತೃತ್ವದಲ್ಲಿ ನಾನು, ತೆಲಂಗಾಣ ಸಿಎಂ ಹಾಗೂ ಆಂಧ್ರಪ್ರದೇಶ ಸಿಎಂ ಒಟ್ಟಿಗೆ ಸಭೆ ಮಾಡಿ ಒಂದು ಒಮ್ಮತದ ತೀರ್ಮಾನಕ್ಕೆ ಬಂದಿದ್ದೇವೆ. ಆಂಧ್ರ ಸಿಎಂ ದೇಶದ ಹಿರಿಯ ರಾಜಕಾರಣಿ, ಅವರಿಗೆ ಸಾಕಷ್ಟು ಅನುಭವವಿದೆ. ಅವರೊಂದಿಗೆ ತುಂಗಭದ್ರಾ ಅಣೆಕಟ್ಟಿನ ಹೂಳು ತುಂಬಿರುವುದರಿಂದ ಕರ್ನಾಟಕಕ್ಕೆ ಆಗುತ್ತಿರುವ 33 ಟಿಎಂಸಿ ನೀರಿನ ನಷ್ಟವನ್ನು ತಡೆಯಲು ಸಮತೋಲಿತ ಅಣೆಕಟ್ಟು ನಿರ್ಮಾಣ ಸೇರಿದಂತೆ ಅನೇಕ ಪರ್ಯಾಯ ಆಯ್ಕೆ, ನದಿ ಜೋಡಣೆ ವಿಚಾರದಲ್ಲಿ ಒಮ್ಮತದ ತೀರ್ಮಾನ ಮಾಡಲಾಗಿದೆ” ಎಂದರು.

“ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಕೈಗೆತ್ತಕೊಂಡು 90-10 ಅನುಪಾತದಲ್ಲಿ ಕೇಂದ್ರ ಸರ್ಕಾರ ಹಣವನ್ನು ಭರಿಸಲಿದೆ. ಹೀಗಾಗಿ ಸಿ ಆರ್ ಪಾಟೀಲ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದೇ ರೀತಿ ತಮಿಳುನಾಡು ಸಿಎಂ ಕರ್ನಾಟಕಕ್ಕೆ ಆಗಮಿಸಿ ಚರ್ಚೆ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು, ಬಿಜೆಪಿ ಸ್ನೇಹಿತರು, ರೈತ ಸಂಘಟನೆಗಳು ಹೋರಾಟ ಮಾಡುತ್ತಿವೆ. ಅವರು ಹೋರಾಟ ಮಾಡುವುದನ್ನು ತಪ್ಪು ಎಂದು ಹೇಳುವುದಿಲ್ಲ. ನಮ್ಮ ಸರ್ಕಾರ ಪ್ರತಿ ಸಂದರ್ಭದಲ್ಲಿ ರಾಜ್ಯದ ಹಿತ ಕಾಪಾಡಿಕೊಂಡು ಬಂದಿದೆ. ಯಾವ ಸಂದರ್ಭದಲ್ಲೂ ರೈತರನ್ನು ಕೈ ಬಿಟ್ಟಿಲ್ಲ. ಇಂದು ಬೆಳಗ್ಗೆ ಬಿಜೆಪಿ ನಾಯಕರು ಹೋರಾಟ ಮಾಡಿದ್ದಾರೆ. ಅವರ ಪಕ್ಷದ ಕೇಂದ್ರದ ಮಂತ್ರಿಗಳು ಹಾಗೂ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ. ಸರ್ವಪಕ್ಷ ಸಭೆ ಕರೆಯಲಾಗಿದೆ. ಎಲ್ಲರ ಜೊತೆ ಚರ್ಚೆ ಮಾಡದೇ ನಾನು ಅಂತಿಮ ತೀರ್ಮಾನ ಮಾಡುವುದಿಲ್ಲ. ಹೀಗಿರುವಾಗ ಬಿಜೆಪಿ ನಾಯಕರು ಇಂದು ಹೋರಾಟ ಮಾಡುವ ಅಗತ್ಯವಿರಲಿಲ್ಲ”

ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಪ್ರಯೋಜನ

“ಮೇಕೆದಾಟು ಯೋಜನೆ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಪ್ರಯೋಜನವಾಗಲಿದೆ. ನಾವು ಕೇವಲ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಹಾಗೂ ಕುಡಿಯುವ ನೀರಿನ ಪೂರೈಕೆಗೆ ಬಳಕೆಯಾಗಲಿದೆ. ಈ 66 ಟಿಎಂಸಿ ನೀರನ್ನು ಯಾವುದೇ ಕಾರಣಕ್ಕೂ ನೀರಾವರಿ ಉದ್ದೇಶಕ್ಕೆ ಬಳಸಿಕೊಳ್ಳುವುದಿಲ್ಲ. ಇಂತಹ ಕಠಿಣ ಸಂದರ್ಭದಲ್ಲಿ ನೀರು ಹರಿಸುವ ಆದೇಶ ಬಂದಾಗ ಅದನ್ನು ಪಾಲನೆ ಮಾಡಲು ನೆರವಾಗುತ್ತದೆ. ಇತ್ತೀಚೆಗೆ ಬಂದ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ, ತಮಿಳುನಾಡಿಗೆ 177 ಟಿಎಂಸಿ ನೀರು ಹರಿಸಬೇಕು ಎಂದು ನಮಗೂ ನಿರ್ದೇಶನ ನೀಡಿದೆ. ಅದನ್ನು ಪಾಲಿಸುವಲ್ಲಿ ನಮ್ಮ ಅಭ್ಯಂಥರವಿಲ್ಲ. ನಿಮ್ಮ ಜಾಗದಲ್ಲಿ ನೀವು ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಕೇಂದ್ರ ಸಚಿವರು ರಾಜ್ಯಸಭೆಯಲ್ಲಿ ಈ ಬಗ್ಗೆ ಉತ್ತರ ನೀಡಿದ್ದಾರೆ. ಈ ಮಧ್ಯೆ ತಮಿಳುನಾಡು ವಿಧಾನಸಭೆಯಲ್ಲಿ ಅವರು ನಿರ್ಣಯ ಮಂಡಿಸಿದ್ದಾರೆ. ಅದು ಅವರ ರಾಜಕಾರಣ, ಅದನ್ನು ನಾನು ಪ್ರಶ್ನೆ ಮಾಡುವುದಿಲ್ಲ. ನಾವು ನಮ್ಮ ರಾಜ್ಯದ ಹಿತಕ್ಕೆ ಕಾನೂನು ಚೌಕಟ್ಟಿನಲ್ಲಿ ಬಗೆಹರಿಸುತ್ತೇವೆ. ಮೇಕೆದಾಟು ಯೋಜನೆ ಡಿಪಿಆರ್ ತಿರಸ್ಕಾರಗೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಅದು ತಿರಸ್ಕಾರವಲ್ಲ, ಅವರು ಕೆಲವು ವಿಚಾರವಾಗಿ ಸ್ಪಷ್ಟನೆ ಕೇಳಿದ್ದು, ಅವುಗಳನ್ನು ಸಧ್ಯದಲ್ಲೇ ನೀಡುತ್ತೇವೆ” ಎಂದು ವಿವರಿಸಿದರು.

ಎರಡು ರಾಜ್ಯಗಳ ಸಿಎಂಗಳ ಭೇಟಿ ಪ್ರಸ್ತಾಪ ನಮ್ಮ ರಾಜ್ಯದಿಂದ ಹೋಗಿದ್ದಾ ಅಥವಾ ತಮಿಳುನಾಡಿನಿಂದ ಬಂದಿದ್ದಾ ಎಂದು ಕೇಳಿದಾಗ, “ತಮಿಳುನಾಡಿನ ಮುಖ್ಯಮಂತ್ರಿಗಳ ಕಚೇರಿಯಿಂದ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬಂದಿದ್ದು, ಅವರ ಮುಖ್ಯಮಂತ್ರಿಗಳು ಕರ್ನಾಟಕಕ್ಕೆ ಭೇಟಿ ನೀಡಿ ಅನೇಕ ವಿಚಾರವಾಗಿ ಚರ್ಚೆ ಮಾಡಲು ಬಯಸಿದ್ದಾರೆ ಎಂದು ತಿಳಿಸಲಾಗಿತ್ತು. ನಾವು ಅದಕ್ಕೆ ಸಮ್ಮತಿ ನೀಡಿ ಆಗಸ್ಟ್ 3ರಂದು ಸಭೆಗೆ ತೀರ್ಮಾನ ಮಾಡಿದ್ದೆವು. ಆದರೆ ಈಗ ಸಭೆಗೆ ವಾತಾವರಣ ಸರಿಯಾಗಿಲ್ಲ ಎಂದು ಮುಂದೂಡಲು ಚಿಂತಿಸುತ್ತಿದ್ದೇವೆ. ಎರಡೂ ರಾಜ್ಯದಲ್ಲಿರುವ ರೈತರು ನಮ್ಮ ದೇಶದವರೇ, ನಾವು ಒಟ್ಟಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು” ಎಂದು ತಿಳಿಸಿದರು.

ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ.

ಕುಡಿಯುವ ನೀರಿಗೆ ಸಮಸ್ಯೆಯಾಗುವುದಿಲ್ಲವೇ ಎಂದು ಕೇಳಿದಾಗ, “ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಇದಕ್ಕೆ 40 ಟಿಎಂಸಿ ನೀರಿನ ಅಗತ್ಯವಿದ್ದು, 36 ಟಿಎಂಸಿ ಕುಡಿಯಲು ಹಾಗೂ 4 ಟಿಎಂಸಿ ನೀರು ಆವಿಯಾಗುವ ಸಾಧ್ಯತೆ ಇರುತ್ತದೆ. ಉಳಿದಂತ ಹೆಚ್ಚುವರಿ ನೀರನ್ನು ಸಂಕಷ್ಟದ ಪರಿಸ್ಥಿತಿಯಲ್ಲಿ ನೀರುಹಂಚಿಕೆ ಸೂತ್ರದ ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು” ಎಂದು ತಿಳಿಸಿದರು.

ಜಾಹೀರಾತು
AdSense · in-feed

ಸಂಬಂಧಿತ ಲೇಖನಗಳು