​ಝೆಪ್ಟೋ, ಬುಕ್‌ಮೈಶೋಗೆ ಕೋಟಿ ದಂಡ! ಏನಿದು ಗ್ರಾಹಕರನ್ನು ಬುಟ್ಟಿಗೆ ಹಾಕಿಕೊಳ್ಳುವ ‘ಡಾರ್ಕ್ ಪ್ಯಾಟರ್ನ್’?

2 min read · Updated 33 views
WhatsApp
​ಝೆಪ್ಟೋ, ಬುಕ್‌ಮೈಶೋಗೆ ಕೋಟಿ ದಂಡ! ಏನಿದು ಗ್ರಾಹಕರನ್ನು ಬುಟ್ಟಿಗೆ ಹಾಕಿಕೊಳ್ಳುವ ‘ಡಾರ್ಕ್ ಪ್ಯಾಟರ್ನ್’?

ಇಂದಿನ ಡಿಜಿಟಲ್ ಯುಗದಲ್ಲಿ ಬಟ್ಟೆ, ದಿನಸಿ, ಟಿಕೆಟ್‌ನಿಂದಿಡಿದು ಆನ್‌ಲೈನ್ ಕೋರ್ಸ್‌ಗಳವರೆಗೆ ಎಲ್ಲವನ್ನೂ ಮೊಬೈಲ್ ಆ್ಯಪ್‌ಗಳ ಮೂಲಕವೇ ಖರೀದಿಸುತ್ತೇವೆ. ಆದರೆ, ನಮಗೆ ಗೊತ್ತಿಲ್ಲದಂತೆಯೇ ನಮ್ಮ ಜೇಬಿನಿಂದ ಹೆಚ್ಚುವರಿ ಹಣ ಖಾಲಿಯಾಗುತ್ತಿರುವುದು ನಿಮ್ಮ ಗಮನಕ್ಕೆ ಬಂದಿದೆಯೇ? ಇದಕ್ಕೆ ಪ್ರಮುಖ ಕಾರಣ ‘ಡಾರ್ಕ್‌ ಪ್ಯಾಟರ್ನ್‌’ (Dark Patterns).

ಇತ್ತೀಚೆಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು (CCPA) ಗ್ರಾಹಕರಿಗೆ ಮೋಸ ಮಾಡುತ್ತಿದ್ದ ಝೆಪ್ಟೋ, ಬುಕ್‌ಮೈಶೋ, ಫಿಸಿಕ್ಸ್ ವಾಲಾ ಸೇರಿದಂತೆ 9 ಪ್ರಸಿದ್ಧ ಕಂಪನಿಗಳಿಗೆ ಒಟ್ಟು ₹20 ಲಕ್ಷ ದಂಡ ವಿಧಿಸಿದೆ. ಹಾಗಾದರೆ ಏನಿದು ಡಾರ್ಕ್ ಪ್ಯಾಟರ್ನ್? ಇದರಿಂದ ನಾವು ಪಾರಾಗುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ.

ಏನಿದು ‘ಡಾರ್ಕ್ ಪ್ಯಾಟರ್ನ್’?

ಆನ್‌ಲೈನ್ ಆ್ಯಪ್ ಅಥವಾ ವೆಬ್‌ಸೈಟ್‌ಗಳು ತಮ್ಮ ಲಾಭಕ್ಕಾಗಿ ಗ್ರಾಹಕರಿಗೆ ಗೊತ್ತಾಗದಂತೆ ಅಥವಾ ಅವರ ನಿರ್ಧಾರವನ್ನು ಪ್ರಭಾವಿಸಿ, ಹೆಚ್ಚಿನ ಹಣ ಪಾವತಿಸುವಂತೆ ಮಾಡುವ ಮೋಸದ ಡಿಸೈನ್ ತಂತ್ರಗಳನ್ನು ‘ಡಾರ್ಕ್ ಪ್ಯಾಟರ್ನ್’ ಎನ್ನಲಾಗುತ್ತದೆ.

  • ಇದು ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಇಲ್ಲಿದೆ ಒಂದು ಸರಳ ಉದಾಹರಣೆ:

  • ಉದಾಹರಣೆ: ಕಣ್ಣಿಗೆ ಕಾಣದೆ ಬುಟ್ಟಿಗೆ ಸೇರುವ ಹೆಚ್ಚುವರಿ ಶುಲ್ಕ Basket Sneakingg

  • ನೀವು ಆನ್‌ಲೈನ್‌ನಲ್ಲಿ ₹500 ರ ಟೀ-ಶರ್ಟ್ ಆಯ್ಕೆ ಮಾಡಿ 'Checkout' ಪುಟಕ್ಕೆ ಹೋಗುತ್ತೀರಿ.

  • ಸಾಮಾನ್ಯ ಸಂದರ್ಭದಲ್ಲಿ ಬೆಲೆ ₹500 ಇರಬೇಕು. ಆದರೆ, ಕೆಲವು ಆ್ಯಪ್‌ಗಳು ನಿಮಗೆ ಗೊತ್ತಾಗದಂತೆ ₹20 ರ ದೇಣಿಗೆ ಅಥವಾ ₹30 ರ ವಿಮೆಯನ್ನು (Insurance) ಮುಂಚಿತವಾಗಿಯೇ ಆಯ್ಕೆ ಮಾಡಿ (Pre-select) ಇಟ್ಟಿರುತ್ತವೆ. ಅಂತಿಮವಾಗಿ ಪಾವತಿಸುವಾಗ ₹550 ತೋರಿಸಲಾಗುತ್ತದೆ.

  • ನೀವು ಆತುರದಲ್ಲಿ ಬಟನ್ ಒತ್ತಿದರೆ, ನಿಮಗೆ ಬೇಕಿಲ್ಲದಿದ್ದರೂ ₹50 ಹೆಚ್ಚುವರಿ ಹಣ ಕಂಪನಿಯ ಪಾಲಾಗುತ್ತದೆ! ಇದನ್ನು ತಡೆಯಬೇಕಾದರೆ ನೀವು ಸಣ್ಣ ಅಕ್ಷರಗಳಲ್ಲಿರುವ ಆ ಆಯ್ಕೆಯನ್ನು ಹುಡುಕಿ ಅನ್‌ಚೆಕ್ (Uncheck) ಮಾಡಬೇಕಾಗುತ್ತದೆ.

ಇತ್ತೀಚೆಗೆ ದಂಡಕ್ಕೊಳಗಾದ ಪ್ರಮುಖ ಸಂಸ್ಥೆಗಳು ಮತ್ತು ಅವರ ತಂತ್ರಗಳು

  • ಕೇಂದ್ರ ಸರ್ಕಾರದ ನಿರ್ದೇಶನದಂತೆ ಪರಿಶೀಲನೆ ನಡೆಸಿದ CCPA, ಗ್ರಾಹಕರಿಗೆ ಮೋಸ ಮಾಡುತ್ತಿದ್ದ ಈ ಕೆಳಗಿನ ಸಂಸ್ಥೆಗಳ ಮೇಲೆ ಕ್ರಮ ಕೈಗೊಂಡಿದೆ:

  • ಝೆಪ್ಟೋ (₹7 ಲಕ್ಷ ದಂಡ): ಆರಂಭದಲ್ಲಿ ಕಡಿಮೆ ದರ ತೋರಿಸಿ, ಕೊನೆಯ ಹಂತದಲ್ಲಿ ಹ್ಯಾಂಡ್ಲಿಂಗ್ ಶುಲ್ಕ, ಸದಸ್ಯತ್ವ ಶುಲ್ಕ ಸೇರಿಸುವುದು.

  • ಫಿಸಿಕ್ಸ್ ವಾಲಾ (₹5 ಲಕ್ಷ ದಂಡ) & ಬುಕ್‌ಮೈಶೋ: ಗ್ರಾಹಕರ ಅನುಮತಿಯಿಲ್ಲದೆ ಸ್ವಯಂಪ್ರೇರಿತವಾಗಿ ದೇಣಿಗೆ ಮೊತ್ತವನ್ನು ಕಾರ್ಟ್‌ಗೆ ಸೇರಿಸುವುದು.

  • ಇಂಡಿಗೋ & ಸ್ಪೈಸ್‌ಜೆಟ್: ವಿಮೆ ಅಥವಾ ಹೆಚ್ಚುವರಿ ಸೇವೆ ನಿರಾಕರಿಸಿದಾಗ "No, I will take risk" ನಂತಹ ಭಾವನಾತ್ಮಕ ಸಂದೇಶ ಪ್ರದರ್ಶಿಸಿ ಭೀತಿ ಹುಟ್ಟಿಸುವುದು ಅಥವಾ ಬಲವಂತದ ಸಮ್ಮತಿ ಪಡೆಯುವುದು.

  • ಫರ್ಸ್ಟ್ ಕ್ರೈ, ಫಾರ್ಮ್‌ಈಸಿ, ಮೆಕಾಫಿ: ಹಿಡನ್ ಚಾರ್ಜ್ ಹಾಗೂ ಅಕೌಂಟ್ ಕ್ಯಾನ್ಸಲ್ ಮಾಡದಂತೆ ಕ್ಲಿಷ್ಟಕರ ಆಯ್ಕೆಗಳನ್ನು ನೀಡುವುದು.

ಗ್ರಾಹಕರು ವಂಚನೆಯಿಂದ ತಪ್ಪಿಸಿಕೊಳ್ಳುವುದು ಹೇಗೆ?

  1. ಚೆಕ್‌ಔಟ್‌ ಪುಟವನ್ನು ಸೂಕ್ಷ್ಮವಾಗಿ ಗಮನಿಸಿ: ಪಾವತಿ (Payment) ಮಾಡುವ ಮುನ್ನ ಅಂತಿಮ ಮೊತ್ತವನ್ನು ಕಡ್ಡಾಯವಾಗಿ ಪರಿಶೀಲಿಸಿ.

  2. ಆಟೋ-ಸೆಲೆಕ್ಟ್ ಬಾಕ್ಸ್‌ಗಳನ್ನು ತೆಗೆಯಿರಿ: ನಿಮಗೇ ಅರಿವಿಲ್ಲದೆ 'Tick' ಆಗಿರುವ ದೇಣಿಗೆ, ವಿಮೆ ಅಥವಾ ಸದಸ್ಯತ್ವ ಪ್ಲಾನ್‌ಗಳನ್ನು 'Uncheck' ಮಾಡಿ.

  3. ಸಣ್ಣ ಅಕ್ಷರಗಳ ನಿಯಮಗಳನ್ನು ಓದಿ: ‘ಉಚಿತ’ ಎಂದು ನೀಡುವ ಆಫರ್‌ಗಳಿಗೆ ನಿಮ್ಮ ಖಾಸಗಿ ಮಾಹಿತಿ ನೀಡುವ ಮುನ್ನ ಎಚ್ಚರ ವಹಿಸಿ.

  4. ಆತುರದ ನಿರ್ಧಾರ ಬೇಡ: "ಆಫರ್ ಮುಗಿಯಲು ಕೇವಲ 2 ನಿಮಿಷ ಬಾಕಿ ಇದೆ" ಎಂಬಂತಹ ಸುಳ್ಳು ತುರ್ತು ಸಂದೇಶಗಳಿಗೆ (False Urgency) ಮರುಳಾಗಬೇಡಿ.

ವಂಚನೆಗೊಳಗಾದರೆ ದೂರು ನೀಡುವುದು ಎಲ್ಲಿ?

ಕೇಂದ್ರ ಸರ್ಕಾರವು 2023ರಲ್ಲೇ 13 ಮಾದರಿಯ ಡಾರ್ಕ್ ಪ್ಯಾಟರ್ನ್‌ಗಳನ್ನು ನಿಷೇಧಿಸಿದೆ. ಯಾವುದೇ ಆ್ಯಪ್‌ನಲ್ಲಿ ಇಂತಹ ಮೋಸದ ತಂತ್ರ ಕಂಡುಬಂದರೆ ನೀವು ದೂರು ನೀಡಬಹುದು:

  • ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH): Toll-Free 1915 ಗೆ ಕರೆ ಮಾಡಿ.

  • ಆನ್‌ಲೈನ್‌ ಪೋರ್ಟಲ್: consumerhelpline.gov.in ವೆಬ್‌ಸೈಟ್ ಭೇಟಿ ನೀಡಿ

Advertisement
AdSense · in-feed

Related