ಸ್ಕ್ರೀನ್ ಟೈಮ್‌ಗೆ ಹೇಳಿ ಗುಡ್‌ಬೈ: ಮಗುವಿಗೆ ನೀಡಿ ಚಾರಣದ ಸುಂದರ ಅನುಭವ!

2 मिनट में पढ़ें · अपडेट किया गया 89 व्यूज़
WhatsApp
ಸ್ಕ್ರೀನ್ ಟೈಮ್‌ಗೆ ಹೇಳಿ ಗುಡ್‌ಬೈ: ಮಗುವಿಗೆ ನೀಡಿ ಚಾರಣದ  ಸುಂದರ ಅನುಭವ!

-ತೇಜಸ್ವಿನಿ ಹರಿಪ್ರಸಾದ್ .

ಇಂದಿನ ಮಕ್ಕಳ ಜಗತ್ತು ಬಹುಪಾಲು ಸ್ಕ್ರೀನ್ ಟೈಮ್, ಅಂಕಗಳು, ಗ್ಯಾಜೆಟ್‌ಗಳು ಮತ್ತು ಮೊಬೈಲ್ ಗೇಮ್‌ಗಳ ಸುತ್ತಲೇ ತಿರುಗುತ್ತಿದೆ. ಇಂತಹ ಸಮಯದಲ್ಲಿ ನಿಮ್ಮ ಮಗುವಿಗೆ ನೀವು ಕೊಡಬಹುದಾದ ಅತ್ಯುತ್ತಮ ಉಡುಗೊರೆ — ಒಂದು ಸುಂದರ ಬೆಟ್ಟದ ಹಾದಿ!

ಕಾಲಿನ ಕೆಳಗೆ ಏರುಪೇರಾದ ಮಣ್ಣು, ಮುಖಕ್ಕೆ ತಾಕುವ ತಂಪಾದ ಗಾಳಿ, ಸುತ್ತಲೂ ಹಸಿರು, ಪಕ್ಷಿಗಳ ಕಲರವ... ಕೊನೆಗೆ ದಣಿದ ಕಾಲುಗಳೊಂದಿಗೆ ಬೆಟ್ಟದ ತುದಿ ತಲುಪಿದಾಗ ಸಿಗುವ ಆ ಖುಷಿಗೆ ಬೆಲೆ ಕಟ್ಟಲಾಗದು. ಟ್ರೆಕ್ಕಿಂಗ್ ಕೇವಲ ಹೊರಾಂಗಣ ಚಟುವಟಿಕೆಯಲ್ಲ, ಅದು ಒಂದು ಪುಟ್ಟ ಸಾಹಸದೊಳಗೆ ಅಡಗಿರುವ ದೊಡ್ಡ ಜೀವನ ಪಾಠ.

ಚಾರಣಕ್ಕೆ ಸರಿಯಾದ ವಯಸ್ಸು ಮತ್ತು ಆರಂಭಿಕ ಹೆಜ್ಜೆಗಳು

"ನನ್ನ ಮಗು ಟ್ರೆಕ್ಕಿಂಗ್ ಮಾಡಲು ಇನ್ನೂ ಚಿಕ್ಕವನೇ/ಚಿಕ್ಕವಳೇ?" ಎಂಬುದು ಬಹುತೇಕ ಪೋಷಕರ ಮೊದಲ ಪ್ರಶ್ನೆ. ಚಿಕ್ಕ ಮಕ್ಕಳಿಗೂ ಸರಳವಾದ ನೇಚರ್ ಟ್ರೈಲ್ ಪರಿಚಯಿಸಬಹುದು. ಆದರೆ 6ರಿಂದ 8 ವರ್ಷದ ವಯಸ್ಸು ಮಕ್ಕಳಲ್ಲಿ ಟ್ರೆಕ್ಕಿಂಗ್ ಬಗ್ಗೆ ಆಸಕ್ತಿ ಬೆಳೆಸಲು ಅತ್ಯುತ್ತಮ ಹಂತ.

ಈ ವಯಸ್ಸಿನಲ್ಲಿ ಮಕ್ಕಳಲ್ಲಿ ಅಪಾರ ಶಕ್ತಿ ಮತ್ತು ಕುತೂಹಲವಿರುತ್ತದೆ. ದಾರಿಯಲ್ಲಿ ಕಾಣುವ ಚಿಟ್ಟೆ, ವಿಚಿತ್ರ ಕಲ್ಲು, ಪುಟ್ಟ ಹೊಳೆ ಅಥವಾ ಹೂವು ಕೂಡ ಅವರಿಗೆ ದೊಡ್ಡ ಅಚ್ಚರಿಯೇ ಸರಿ! ಆರಂಭದಲ್ಲೇ ದೊಡ್ಡ ಬೆಟ್ಟಗಳನ್ನು ಏರುವ ಗುರಿ ಇಟ್ಟುಕೊಳ್ಳದೆ, ಮೊದಲು ಪ್ರಕೃತಿಯನ್ನು ಅವರ ಅತ್ಯುತ್ತಮ ಗೆಳೆಯನನ್ನಾಗಿ ಮಾಡಿ.

ಪಠ್ಯಪುಸ್ತಕಗಳು ಕಲಿಸದ ಅನರ್ಘ್ಯ ಜೀವನ ಪಾಠಗಳು

ಪೋಟೋ ಕೃಪೆ: ತೇಜಸ್ವಿನಿ

ಟ್ರೆಕ್ಕಿಂಗ್ ಮಕ್ಕಳ ದೈಹಿಕ ಸಾಮರ್ಥ್ಯವನ್ನು ಮಾತ್ರವಲ್ಲ, ಅವರ ಮನಸ್ಸು ಮತ್ತು ವ್ಯಕ್ತಿತ್ವವನ್ನೂ ಗಟ್ಟಿಗೊಳಿಸುತ್ತದೆ.

ಛಲ ಮತ್ತು ಸಹನೆ: ಬಿಸಿಲು, ಬೆವರು, ದಣಿವು... ಟ್ರೆಕ್ಕಿಂಗ್‌ನಲ್ಲಿ ಕಷ್ಟಗಳು ಸಹಜ. ಆದರೆ "ಇನ್ನೊಂದು ಹೆಜ್ಜೆ ಇಡೋಣ" ಎಂದು ಮುಂದೆ ಸಾಗುತ್ತಾ ಮಗು ಕಷ್ಟ ಶಾಶ್ವತವಲ್ಲ, ಶ್ರಮಿಸಿದರೆ ಗುರಿ ತಲುಪಬಹುದು ಎಂಬ ಮಹತ್ವದ ಪಾಠ ಕಲಿಯುತ್ತದೆ.

ತಾಳ್ಮೆ: ಡಿಜಿಟಲ್ ಜಗತ್ತಿನಲ್ಲಿ ಎಲ್ಲವೂ ಕ್ಷಣಾರ್ಧದಲ್ಲಿ ಸಿಗುತ್ತದೆ. ಆದರೆ ಬೆಟ್ಟದ ಮೇಲಿನ ಸುಂದರ ನೋಟವನ್ನು ಅನುಭವಿಸಲು ಮೊದಲು ನಡೆಯಬೇಕು, ಏರಬೇಕು ಮತ್ತು ಕಾಯಬೇಕು. ಹೀಗೆ ಮಕ್ಕಳು ಶ್ರಮದ ನಂತರ ಸಿಗುವ ಸಂತೋಷದ ಮೌಲ್ಯವನ್ನು ಗ್ರಹಿಸುತ್ತಾರೆ.

ಸ್ವಾವಲಂಬನೆ ಮತ್ತು ನಿರ್ಧಾರ ಶಕ್ತಿ: ಯಾವ ಕಲ್ಲಿನ ಮೇಲೆ ಕಾಲಿಡಬೇಕು? ಯಾವ ದಾರಿಯಲ್ಲಿ ಸಾಗಬೇಕು? ಇಂತಹ ಸಣ್ಣ ನಿರ್ಧಾರಗಳು ಮಕ್ಕಳಲ್ಲಿ ಸ್ವತಂತ್ರ ಆಲೋಚನೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತವೆ.

ಗ್ಯಾಜೆಟ್ ಮನ್ನಣೆಯಿಂದ ಪ್ರಕೃತಿಯ ಅನುಭವದ ಕಡೆಗೆ : ಬೆಟ್ಟದ ತುದಿಯಲ್ಲಿ ಕಾಣುವ ಸೂರ್ಯೋದಯ, ಕಾಡಿನ ನಡುವಿನ ಪುಟ್ಟ ಜಲಧಾರೆ ಅಥವಾ ಅನಿರೀಕ್ಷಿತವಾಗಿ ಎದುರಾಗುವ ಗುಹೆ — ಇವುಗಳು ಮಕ್ಕಳ ಗಮನವನ್ನು "ನನ್ನ ಬಳಿ ಏನಿದೆ?" ಎನ್ನುವುದರಿಂದ "ನಾನು ಏನು ಅನುಭವಿಸಿದೆ?" ಎನ್ನುವ ಕಡೆಗೆ ಕರೆದೊಯ್ಯುತ್ತದೆ. ನಿನ್ನೆ ಹೊಸ ಗ್ಯಾಜೆಟ್ ಕೇಳುತ್ತಿದ್ದ ಮಗು, ನಾಳೆ "ಮತ್ತೆ ಯಾವಾಗ ಬೆಟ್ಟಕ್ಕೆ ಹೋಗೋಣ?" ಎಂದು ಕೇಳಲು ಪ್ರಾರಂಭಿಸುತ್ತದೆ.

ಪ್ರಕೃತಿಯ ಮಡಿಲಲ್ಲಿ ಕುಟುಂಬದ ಬಾಂಧವ್ಯ : ಟಿವಿ ಮೊಬೈಲುಗಳ ಹಾವಳಿ ಇಲ್ಲದ ಬೆಟ್ಟದ ಹಾದಿಯಲ್ಲಿ ಪೋಷಕರು ಹಾಗು ಮಕ್ಕಳು ಪರಸ್ಪರ ಮಾತನಾಡಲು ಮುಕ್ತ ಸಮಯ ಸಿಗುತ್ತದೆ. ನಡೆಯುತ್ತಾ ಮಕ್ಕಳು ಶಾಲೆಯ ಕಥೆಗಳನ್ನು, ತಮ್ಮ ಕನಸುಗಳನ್ನು ಹಂಚಿಕೊಳ್ಳಬಹುದು; ಪೋಷಕರೂ ಯಾವುದೇ ಒತ್ತಡವಿಲ್ಲದೆ ಹರಟಬಹುದು.ತಮ್ಮ ಬಾಲ್ಯದ ಅನುಭವಗಳನ್ನು ಹಂಚಿಕೊಳ್ಳಬಹುದು.

ಬೆಂಗಳೂರಿನ ಸುತ್ತಮುತ್ತ ಆರಂಭಿಸಬಹುದಾದ ಟ್ರೆಕ್ಕಿಂಗ್ ಸ್ಥಳಗಳು

ಮೊದಲ ಟ್ರೆಕ್ ತುಂಬಾ ಕಷ್ಟಕರವಾಗಿರಬೇಕೆಂದಿಲ್ಲ. ಬೆಂಗಳೂರಿನ ಸುತ್ತಮುತ್ತ ಕುಟುಂಬದೊಂದಿಗೆ ಭೇಟಿ ನೀಡಬಹುದಾದ ಅತ್ಯುತ್ತಮ ಸ್ಥಳಗಳು:

ಮಂದರ ಗಿರಿ: ೬-೮ ವರ್ಷದ ಮಕ್ಕಳಿಗೆ ಮೊದಲನೇ ಚಾರಣದ ಅನುಭವಕ್ಕೆ ಸೂಕ್ತ

ಕುಣಗಲ್ಲು ಬೆಟ್ಟ ಮತ್ತು ಹರಿಹರ ಬೆಟ್ಟ : ಸರಳವಾದ ನಡಿಗೆ,ಬಂಡೆಗಳು ಮತ್ತು ಗುಹೆಗಳ ಸಾಹಸಮಯ ಅನುಭವಕ್ಕಾಗಿ .

ನಿಜಗಲ್ ಬೆಟ್ಟ ಮತ್ತು ಗುಡಿಬಂಡೆ : ಸುಂದರ ನೋಟಗಳು ಕೋಟೆಗಳ ಪಳೆಯುಳಿಕೆಗಳು ಕಾಣಬಹುದು.

ರಾಮನಗರ: ವಿಶಿಷ್ಟ ಬಂಡೆಗಳ ನಡುವೆ ಚಿಕ್ಕ ಹೈಕ್ ಮತ್ತು ಪಿಕ್ನಿಕ್ ಮಾಡಲು ಅತ್ಯುತ್ತಮ.

ಪೋಷಕರಿಗಾಗಿ ಪ್ರಮುಖ ಸಲಹೆಗಳು :

  • ಮಗುವಿನ ವೇಗಕ್ಕೆ ಹೊಂದಿಕೊಳ್ಳಿ: ಮಗುವಿನ ವೇಗದಲ್ಲೇ ನಡೆಯಿರಿ, ವೇಗವಾಗಿ ಹೋಗಲು ಒತ್ತಾಯಿಸಬೇಡಿ.

ಆಹಾರ ಮತ್ತು ನೀರು: ಸಾಕಷ್ಟು ನೀರು ಮತ್ತು ತಕ್ಷಣ ಶಕ್ತಿ ನೀಡುವ ಸಣ್ಣ ತಿಂಡಿಗಳನ್ನು ಜೊತೆಯಲ್ಲಿಟ್ಟುಕೊಳ್ಳಿ.

ಸರಿಯಾದ ಸಿದ್ಧತೆ: ಉತ್ತಮ ಹಿಡಿತವಿರುವ ಆರಾಮದಾಯಕ ಟ್ರೆಕ್ಕಿಂಗ್ ಶೂಗಳನ್ನು ಬಳಸಿ ಮತ್ತು ಹವಾಮಾನವನ್ನು ಮುಂಚಿತವಾಗಿ ಪರಿಶೀಲಿಸಿ.

ಸಮಯ ಪಾಲನೆ: ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಟ್ರೆಕ್ಕಿಂಗ್ ಮಾಡುವುದನ್ನು ತಪ್ಪಿಸಿ.

ಸ್ವಚ್ಛತೆಯ ಜವಾಬ್ದಾರಿ ಪ್ರಕೃತಿಯಲ್ಲಿ ಕಸ ಎಸೆಯಬೇಡಿ: ಜೊತೆಯಲ್ಲಿ ಗಾರ್ಬೇಜ್ ಬ್ಯಾಗ್ ಒಯ್ಯಿರಿ ಮತ್ತು ತಾವು ತಂದ ಪ್ರತಿಯೊಂದು ಪ್ಲಾಸ್ಟಿಕ್ ಹಾಗೂ ಕಸವನ್ನು ಮರಳಿ ತರುವುದನ್ನು ಅಭ್ಯಾಸ ಮಾಡಿಸಿ.

ಮೊದಲ ಅನುಭವ ಮೋಜಿನಿಂದಿರಲಿ: ಮೊದಲ ಟ್ರೆಕ್ ಚಿಕ್ಕದಾಗಿರಲಿ, ಮಗು ಮತ್ತೆ ಬರಲು ಉತ್ಸುಕವಾಗುವಂತೆ ಇರಲಿ.

ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಅವಕಾಶಗಳ ಜೊತೆಗೆ ಮಣ್ಣು ಮೆತ್ತಿದ ಶೂಗಳು, ಬೆಟ್ಟ ಹತ್ತಿದ ನೆನಪುಗಳು, ಪ್ರಕೃತಿಯ ಮೇಲಿನ ಪ್ರೀತಿ ಹಾಗೂ "ನಾನು ಇದನ್ನು ಮಾಡಬಲ್ಲೆ" ಎಂಬ ಆತ್ಮವಿಶ್ವಾಸವನ್ನು ನೀಡಿ.ನೀವು ಕೇವಲ ಟ್ರೆಕ್ಕಿಂಗ್ ಇಷ್ಟಪಡುವ ಮಗುವನ್ನಷ್ಟೇ ಬೆಳೆಸುತ್ತಿಲ್ಲ; ಕಷ್ಟ ಬಂದಾಗ ಹೆಜ್ಜೆ ನಿಲ್ಲಿಸದ, ತಾಳ್ಮೆಯಿಂದ ಮುಂದೆ ಸಾಗುವ ಜವಾಬ್ದಾರಿಯುತ ವ್ಯಕ್ತಿಯನ್ನು ರೂಪಿಸುತ್ತಿದ್ದೀರಿ.

विज्ञापन
AdSense · in-feed

संबंधित लेख