ನವದೆಹಲಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಕರ್ನಾಟಕ ಸಂಸದರ ಸಭೆ ಈಗ ಶ್ಲಾಘನೆಗೆ ಪಾತ್ರವಾಗಿದ್ದು, ಅಭಿವೃದ್ಧಿ ವಿಚಾರದಲ್ಲಿ ಪಕ್ಷಾತೀತ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಮುಂಗಾರು ಅಧಿವೇಶನ ಸಂದರ್ಭದಲ್ಲಿ ರಾಜ್ಯದ ಸಂಸದರ ಜತೆಗೆ ಮುಖ್ಯಮಂತ್ರಿಯಾದವರು ಸಭೆ ನಡೆಸುವುದು ಒಂದು ಹಳೆ ಸಂಪ್ರದಾಯ. ಆದರೆ ಕೆಲ ವರ್ಷಗಳಿಂದ ಈ ಪ್ರತೀತಿಯ ಪಾಲನೆಯೇ ಆಗುತ್ತಿರಲಿಲ್ಲ. ಸಂಸದರು ಹಾಗೂ ರಾಜ್ಯ ಸರ್ಕಾರದ ಮಧ್ಯೆ ಅಭಿವೃದ್ಧಿ ವಿಚಾರದಲ್ಲಿ ಆರೋಪ-ಪ್ರತ್ಯಾರೋಪಗಳ ವಿನಿಮಯ ಮಾತ್ರವಾಗುತ್ತಿತ್ತು. ಆದರೆ ಡಿ.ಕೆ.ಶಿವಕುಮಾರ್ ಈ ವೈರ ಕ್ಕೆ ತೆರೆ ಎಳೆದಿದ್ದು ಸಂಸದರ ಜತೆಗೆ ಸಭೆ ನಡೆಸಿ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಏಕತೆ ಪ್ರದರ್ಶಿಸುವ ಭರವಸೆ ಮೂಡಿಸಿದ್ದಾರೆ.
ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ಸಂಸದರು ಹಾಗೂ ಕೇಂದ್ರ ಸಚಿವರು, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವ ಅಗತ್ಯವನ್ನು ಒತ್ತಿಹೇಳಿದರು.
ಸಭೆಯ ಉದ್ದೇಶ ಹಾಗೂ ಎಲ್ಲರನ್ನು ಒಳಗೊಳ್ಳುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡೆಗೆ ವಿವಿಧ ಪಕ್ಷಗಳ ಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಕರ್ನಾಟಕದ ಸಂಸದರು ಒಂದೇ ವೇದಿಕೆಯಲ್ಲಿ ಸೇರಿರುವುದು ಇದೇ ಮೊದಲ ಬಾರಿಗೆ ಎಂದು ಕೆಲ ಸದಸ್ಯರು ಅಭಿಪ್ರಾಯಪಟ್ಟರು. ಸಭೆಯ ಅಚ್ಚುಕಟ್ಟಾದ ಆಯೋಜನೆಗೂ ಪ್ರಶಂಸೆ ವ್ಯಕ್ತವಾಯಿತು.
ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮುಂದೆ ಬಾಕಿ ಇರುವ ಯೋಜನೆಗಳು, ಬಿಡುಗಡೆಯಾಗಬೇಕಿರುವ ಅನುದಾನ, ಬರ ನಿರ್ವಹಣೆಗೆ ಅಗತ್ಯ ನೆರವು ಸೇರಿದಂತೆ ವಿವಿಧ ವಿಷಯಗಳ ಕುರಿತು ಒಗ್ಗಟ್ಟಿನಿಂದ ಕೇಂದ್ರದ ಗಮನ ಸೆಳೆಯುವ ಅಗತ್ಯವಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಈ ಸಂಬಂಧ ಪಕ್ಷಬೇಧ ಮರೆತು ಒಟ್ಟಾಗಿ ಕೆಲಸ ಮಾಡುವ ಮುಖ್ಯಮಂತ್ರಿ ಅವರ ಕರೆಗೆ ಸದಸ್ಯರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಸಭೆಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಸೇರಿದಂತೆ ಲೋಕಸಭೆ ಮತ್ತು ರಾಜ್ಯಸಭೆಯ ಹಲವು ಸದಸ್ಯರು ಭಾಗವಹಿಸಿದ್ದರು. ರಾಜ್ಯಸಭೆ ಸದಸ್ಯೆ ಸುಧಾ ಮೂರ್ತಿ ಸೇರಿದಂತೆ ವಿವಿಧ ಪಕ್ಷಗಳ ಸಂಸದರು ಸಭೆಯಲ್ಲಿ ಉಪಸ್ಥಿತರಿದ್ದರು.
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಎಚ್.ಡಿ. ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ, ಜಗ್ಗೇಶ್, ಲೆಹರ್ ಸಿಂಗ್ ಮತ್ತು ಡಾ. ವೀರೇಂದ್ರ ಹೆಗಡೆ ಅವರು ಪೂರ್ವನಿಗದಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಭೆಗೆ ಗೈರಾಗಿದ್ದು, ಈ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದರು.
ಒಟ್ಟಾರೆ, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಪಕ್ಷಾತೀತ ಸಹಕಾರ ಮತ್ತು ಸಮನ್ವಯಕ್ಕೆ ಒತ್ತು ನೀಡಿದ ಈ ಸಭೆ ಯಶಸ್ವಿಯಾಗಿ ನಡೆದಿದ್ದು, ಕೇಂದ್ರದ ಮುಂದೆ ಕರ್ನಾಟಕದ ಪ್ರಮುಖ ಬೇಡಿಕೆಗಳನ್ನು ಒಗ್ಗಟ್ಟಿನಿಂದ ಮಂಡಿಸುವ ಸಂಕಲ್ಪ ವ್ಯಕ್ತವಾಯಿತು.