ನವದೆಹಲಿ: ಪಿಎಂ ಸೂರ್ಯಘರ್ ಯೋಜನೆಯಡಿ ದೇಶಾದ್ಯಂತ 48 ಲಕ್ಷಕ್ಕೂ ಅಧಿಕ ಕುಟುಂಬಗಳು ಪ್ರಯೋಜನ ಪಡೆದಿದ್ದು, ಈಗಾಗಲೇ 18.93 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಶೂನ್ಯ ವಿದ್ಯುತ್ ಬಿಲ್‌ಗೆ ಒಳಪಟ್ಟಿದ್ದಾರೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಪಿಎಂ ಸೂರ್ಯಘರ್ ಮಫ್ತಿ ಬಿಜ್ಲಿ ಯೋಜನೆ 2024ರ ಫೆಬ್ರವರಿಯಲ್ಲಿ ಆರಂಭಗೊಂಡಿದ್ದು, ಈವರೆಗೆ ಒಟ್ಟು 39,72,447 ಸೌರ ಮೇಲ್ಚಾವಣಿ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ. ಗ್ರಾಮೀಣ ಪ್ರದೇಶದ ಮನೆಗಳು ಸೇರಿದಂತೆ ದೇಶಾದ್ಯಂತ 48,02,717 ಮನೆಗಳಿಗೆ ಸೌಲಭ್ಯ ಕಲ್ಪಿಸಿದೆ ಎಂದಿದ್ದಾರೆ.
ದೇಶದಲ್ಲಿ ಗ್ರಾಮೀಣ ಕುಟುಂಬಗಳು ಸೇರಿದಂತೆ 18.93 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಯಾವುದೇ ತಿಂಗಳು ಅಥವಾ ಬಿಲ್ಲಿಂಗ್ ಅವಧಿಯಲ್ಲಿ ಸ್ವಯಂ-ಬಳಕೆ ಅವಲಂಬಿಸಿ ಶೂನ್ಯ ವಿದ್ಯುತ್ ಬಿಲ್ ಪಡೆದಿದ್ದಾರೆ. ಈ ಯೋಜನೆಯಡಿ ಸೌರ ಮೇಲ್ಚಾವಣಿ ಅಳವಡಿಸಿಕೊಂಡ ಗ್ರಾಹಕರ ವಿದ್ಯುತ್ ಬಿಲ್ ಹೆಚ್ಚಾಗಿ ಕಡಿಮೆಯಾಗಿದೆ. ಎಂದು ಡಿಸ್ಕಾಂಗಳು ವರದಿ ಮಾಡಿವೆ ಎಂದು ತಿಳಿಸಿದ್ದಾರೆ.
2025-26ರಲ್ಲಿ ಒಟ್ಟು 18.71 ಲಕ್ಷ ಸೌರ ಮೇಲ್ಚಾವಣಿ ವ್ಯವಸ್ಥೆಗಳನ್ನು 6.7 ಗಿಗಾವ್ಯಾಟ್ ಸ್ಥಾಪಿತ ಸೌರ ಸಾಮರ್ಥ್ಯದೊಂದಿಗೆ ಸ್ಥಾಪಿಸಲಾಗಿದೆ. ಇದು ಪಿಎಂ ಸೂರ್ಯಘರ್ ಯೋಜನೆಯಡಿ ಗ್ರಾಮೀಣ ಮನೆಗಳು ಸೇರಿದಂತೆ ದೇಶಾದ್ಯಂತ 22.71 ಲಕ್ಷ ಮನೆಗಳಿಗೆ ಪ್ರಯೋಜನ ಕಲ್ಪಿಸುತ್ತದೆ ಎಂದು ತಿಳಿಸಿದ್ದಾರೆ .
ವಸತಿ ವಲಯದಲ್ಲಿ ಮೇಲ್ಛಾವಣಿ ಸೌರ ಸ್ಥಾವರ ಸ್ಥಾಪಿಸುವ ಜತೆಗೆ ಸರ್ಕಾರಿ ಕಟ್ಟಡಗಳು, ಶೈಕ್ಷಣಿಕ ಮತ್ತು ಆರೋಗ್ಯ ಸಂಸ್ಥೆಗಳು ಸೇರಿದಂತೆ ವಾಣಿಜ್ಯ ಕಟ್ಟಡಗಳಲ್ಲಿ ಸೌರ ಮೇಲ್ಚಾವಣಿ ಸ್ಥಾವರಗಳನ್ನು ಸ್ಥಾಪಿಸಲು ಸಹ ಅವಕಾಶವಿದೆ. ಆದರೆ, ಇವುಗಳಿಗೆ ಕೇಂದ್ರದ ಯಾವುದೇ ಹಣಕಾಸು ನೆರವು ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಪಿಎಂ ಸೂರ್ಯ ಘರ್: ಮಫ್ತ್ ಬಿಜ್ಲಿ ಯೋಜನೆ ಬೇಡಿಕೆ ಆಧಾರಿತ ಯೋಜನೆಯಾಗಿದೆ. ಗ್ರಾಮೀಣ ಪ್ರದೇಶದ ಕುಟುಂಬಗಳು ಸೇರಿದಂತೆ ದೇಶದೆಲ್ಲೆಡೆ ಗ್ರಾಹಕರು ರಾಷ್ಟ್ರೀಯ ಪೋರ್ಟಲ್ (www.pmsuryaghar.gov.in) ನಲ್ಲಿ ಅರ್ಜಿ ಸಲ್ಲಿಸಿ ಸೌರ ಮೇಲ್ಛಾವಣಿ ಸ್ಥಾಪನೆಗೆ ಪ್ರಯೋಜನ ಪಡೆಯಬಹುದು ಎಂದು ಹೇಳಿದ್ದಾರೆ